ADVERTISEMENT

ಬೆಂಗಳೂರು: ನಾಲ್ವರು ಡ್ರಗ್ಸ್‌ ಪೆಡ್ಲರ್‌ಗಳ ಬಂಧನ

₹18 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 15:27 IST
Last Updated 2 ಜುಲೈ 2024, 15:27 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನಗರದ ಹಲವು ಕಡೆ ಕಾರ್ಯಾಚರಣೆ ನಡೆಸಿದ ಸಿಸಿಬಿ, ಕೋಣನಕುಂಟೆ ಹಾಗೂ ವಿ.ವಿ ಪುರಂ ಠಾಣೆ ಪೊಲೀಸರು, ಇಬ್ಬರು ವಿದೇಶಿ ಪ್ರಜೆಗಳೂ ಸೇರಿ ನಾಲ್ವರು ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಅಂದಾಜು ₹18 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಮೋಜಿನ ಜೀವನಕ್ಕಾಗಿ ಡ್ರಗ್ಸ್‌ ಮಾರಾಟ ದಂಧೆ: ವಿದ್ಯಾರಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಡ್ರಗ್ಸ್ ಪೂರೈಸುತ್ತಿದ್ದ ಘಾನಾ ದೇಶದ ಕೈರಿಲ್‌ (23) ಹಾಗೂ ನೈಜೀರಿಯಾದ ಇಮ್ಯಾನುವೆಲ್‌ (27) ಬಂಧಿತ ಆರೋಪಿಗಳು.

ಆರೋಪಿ ಇಮ್ಯಾನುವೆಲ್‌ ವಿರುದ್ಧ ಈ ಹಿಂದೆಯೂ ವಿದ್ಯಾರಣ್ಯಪುರ ಹಾಗೂ ಪುಲಕೇಶಿನಗರ ಠಾಣೆಗಳಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣಗಳು ದಾಖಲಾಗಿದ್ದವು.

‘ಆರೋಪಿಗಳಿಂದ ಎಂಡಿಎಂಎ ಕ್ರಿಸ್ಟಲ್‌, ಎಕ್ಸ್‌ಟಸಿ ಪಿಲ್ಸ್ , ಕೊಕೇನ್‌, ಬೈಕ್‌ ಜಪ್ತಿ ಮಾಡಲಾಗಿದೆ. ಇದರ ಮೌಲ್ಯ ₹12 ಲಕ್ಷ ಎಂದು ಅಂದಾಜಿಸಲಾಗಿದೆ. ಇಬ್ಬರೂ ಆರೋಪಿಗಳು ವಿದ್ಯಾರ್ಥಿ ವೀಸಾ ಪಡೆದು ನಗರಕ್ಕೆ ಬಂದು ನೆಲೆಸಿದ್ದರು. ಮೋಜಿನ ಜೀವನ ನಡೆಸಲು ಡ್ರಗ್ಸ್‌ ಪೂರೈಕೆ ದಂಧೆಗೆ ಇಳಿದಿದ್ದರು. ಗೋವಾ, ಮುಂಬೈ ಹಾಗೂ ದೆಹಲಿಯಲ್ಲಿ ವಾಸವಾಗಿರುವ ಘಾನಾ ಹಾಗೂ ನೈಜೀರಿಯಾ ದೇಶದ ಪ್ರಜೆಗಳಿಂದ ಡ್ರಗ್ಸ್‌ ಖರೀದಿಸಿ ಬೆಂಗಳೂರಿನ ಗ್ರಾಹಕರಿಗೆ ಪೂರೈಸುತ್ತಿದ್ದರು. ಎಂಡಿಎಂಎ ಕ್ರಿಸ್ಟಲ್‌ನ ಒಂದು ಗ್ರಾಂಗೆ ₹ 10 ಸಾವಿರದಿಂದ ₹12 ಸಾವಿರ, ಒಂದು ಎಕ್ಸ್‌ಟಸಿ ಪಿಲ್ಸ್‌ ಅನ್ನು ₹5 ಸಾವಿರದಿಂದ ₹ 6 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

ಪಾಪ್ಪಿ ಸ್ಟ್ರಾ ಜಪ್ತಿ: ಡ್ರಗ್ಸ್‌ ಹಾಗೂ ಪಾಪ್ಪಿ ಸ್ಟ್ರಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಂಗನಾಥ್‌ ಕಾಲೊನಿಯ ವಿಕಾಸ್‌(23) ಬಂಧಿತ.

ಆರೋಪಿಯಿಂದ 2 ಕೆ.ಜಿ. 20 ಗ್ರಾಂ ಮಾದಕ ವಸ್ತು ಹಾಗೂ 10 ಕೆ.ಜಿ. 600 ಗ್ರಾಂ ಪಾಪ್ಪಿ ಸ್ಟ್ರಾಗಳನ್ನು ಜಪ್ತಿ ಮಾಡಲಾಗಿದೆ. ಇದರ ಮೌಲ್ಯ ₹1.80 ಲಕ್ಷವೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ನಾರಾಯಣನಗರದ ದೊಡ್ಡಕಲ್ಲಸಂದ್ರದಲ್ಲಿ ಗ್ರಾಹಕರಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

₹5 ಲಕ್ಷ ಮೌಲ್ಯದ ಗಾಂಜಾ ಜಪ್ತಿ: ಪಾರ್ವತಿಪುರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸರ್ಜಾಪುರ ರಫೀಕ್‌ ಕುಮಾರ್‌ (22) ಎಂಬಾತನನ್ನು ವಿ.ವಿ. ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ 3 ಕೆ.ಜಿ. 900 ಗ್ರಾಂ ಗಾಂಜಾ ಹಾಗೂ ತೂಕ ಮಾಡಲು ಬಳಸುತ್ತಿದ್ದ ಎಲೆಕ್ಟ್ರಿಕ್‌ ತೂಕದ ಯಂತ್ರವನ್ನು ಜಪ್ತಿ ಮಾಡಲಾಗಿದೆ. ಇದರ ಮೌಲ್ಯ ₹5 ಲಕ್ಷವೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ವಿರುದ್ಧ ಈ ಹಿಂದೆ ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.