ADVERTISEMENT

ಬೆಂಗಳೂರಿನಲ್ಲಿ ಮೂರು ಪ್ರತ್ಯೇಕ ಅಪಘಾತ: ಎಂಟು ವರ್ಷದ ಬಾಲಕ ಸೇರಿ ನಾಲ್ವರ ಸಾವು

ಚಿಕ್ಕಬಾಣವಾರ, ವೈಟ್‌ಫೀಲ್ಡ್, ಚಾಮರಾಜಪೇಟೆ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 16:03 IST
Last Updated 11 ನವೆಂಬರ್ 2024, 16:03 IST
<div class="paragraphs"><p>ಸಾಂದರ್ಭಿಕ ದೃಶ್ಯ&nbsp;&nbsp;</p></div>

ಸಾಂದರ್ಭಿಕ ದೃಶ್ಯ  

   

ಬೆಂಗಳೂರು: ಚಿಕ್ಕಬಾಣವಾರ, ವೈಟ್‌ಫೀಲ್ಡ್ ಹಾಗೂ ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ, ಸೋಮವಾರ ಮುಂಜಾನೆ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಎಂಟು ವರ್ಷದ ಬಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಚಿಕ್ಕಬಾಣವಾರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತಿವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದರಿಂದ ಸವಾರ, ಎನ್‌ಎಂಎಚ್‌ ಲೇಔಟ್‌ ನಿವಾಸಿ ಭರತ್‌ ಕುಮಾರ್(27) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಪವನ್‌ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಸರಘಟ್ಟ ಮುಖ್ಯರಸ್ತೆಯ ಡಿ–ಮಾರ್ಟ್ ಬಳಿ ಸೋಮವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ.

ADVERTISEMENT

‘ವಿದ್ಯಾನಗರದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಭರತ್‌ ಕುಮಾರ್‌ ಮತ್ತು ಪವನ್‌, ಸೋಮವಾರ ಮುಂಜಾನೆ ದ್ವಿಚಕ್ರ ವಾಹನದಲ್ಲಿ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದರು. ಅದೇ ವೇಳೆ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲೇ ಬರುತ್ತಿದ್ದ ಆಟೊಗೆ ಡಿಕ್ಕಿ ಆಗಿದೆ. ಆಗ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲಿದ್ದವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಭರತ್‌ಕುಮಾರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಎರಡು ಕಡೆ ಅಪಘಾತ: ವೈಟ್‌ಫೀಲ್ಡ್‌ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಸರಕು ಸಾಗಣೆ ಆಟೊ ಚಾಲಕ ಮತ್ತು ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾರೆ.

ವರ್ತೂರು ಕೆರೆ ರಸ್ತೆಯ ದುಗ್ಗಲಮ್ಮ ದೇವಸ್ಥಾನದ ಬಳಿ ನಿಯಂತ್ರಣ ತಪ್ಪಿ ಆಟೊ ಉರುಳಿ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಮಂಜುನಾಥ್‌ (35) ಮೃತಪಟ್ಟಿದ್ದಾರೆ. ಅವರ ಪತ್ನಿ ಮಮತಾ ಗಾಯಗೊಂಡಿದ್ದಾರೆ.

ದಂಪತಿ ಸರಕು ಸಾಗಣೆ ಆಟೊದಲ್ಲಿ ವರ್ತೂರು ಕಡೆಯಿಂದ ವರ್ತೂರು ಕೋಡಿ ಕಡೆಗೆ ತೆರಳುತ್ತಿದ್ದರು. ದುಗ್ಗಲಮ್ಮ ದೇವಸ್ಥಾನದ ಬಳಿ ಆಟೊ ರಸ್ತೆಗೆ ಉರುಳಿ ಬಿದ್ದು ಅವಘಡ ಸಂಭವಿಸಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ನಲ್ಲೂರಹಳ್ಳಿ ನ್ಯೂ ಟೆಂಪಲ್ ರಸ್ತೆ ದಾಟುವಾಗ ಬುಲೆಟ್ ಬೈಕ್‌ ಡಿಕ್ಕಿಯಾಗಿ ಕಲಬುರಗಿಯ ಪರಶುರಾಮ್(8) ಮೃತಪಟ್ಟಿದ್ದಾನೆ.

ಸಿದ್ದಾಪುರ ಕಡೆಯಿಂದ ನಲ್ಲೂರಹಳ್ಳಿ ಕಡೆಗೆ ಅತಿ ವೇಗವಾಗಿ ಬಂದ ಬುಲೆಟ್ ಬೈಕ್‌ ರಸ್ತೆ ದಾಟುತ್ತಿದ್ದ ಪರಶುರಾಮ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಪರಶುರಾಮ್‌ನನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಬಿಜಿಎಸ್‌ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸವಾರ, ಆಜಾದ್‌ನಗರ ನಿವಾಸಿ ಪೋತಿ ಭೂನಿಯಾ(23) ಮೃತಪಟ್ಟಿದ್ದಾರೆ.

ಸೋಮವಾರ ಮುಂಜಾನೆ ಬಿಜಿಎಸ್ ಮೇಲ್ಸೇತುವೆಯ ಸಿಎಆರ್ ಮೈದಾನದ ಬಳಿ ಈ ಅಪಘಾತ ಸಂಭವಿಸಿದೆ.

ಪಶ್ಚಿಮ ಬಂಗಾಳದ ಪೋತಿ ಭೂನಿಯಾ ನಗರದ ಕಬ್ಬನ್‌ಪೇಟೆಯ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆಜಾದ್ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಮುಂಜಾನೆ 3 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಸಿಟಿ ಮಾರುಕಟ್ಟೆ ಕಡೆಯಿಂದ ಆಜಾದ್ ನಗರದ ಕಡೆಗೆ ತೆರಳುವಾಗ ಅಪಘಾತ ಸಂಭವಿಸಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.