ADVERTISEMENT

ಜಿಗಣಿ: ಅಕ್ರಮವಾಗಿ ನೆಲೆಸಿದ್ದ ಪಾಕ್‌ನ ನಾಲ್ವರು ಸೆರೆ

ಹೆಸರು ಬದಲಿಸಿಕೊಂಡು ಆರು ವರ್ಷಗಳಿಂದ ವಾಸವಿದ್ದ ಕುಟುಂಬ l ಪ್ಯಾನ್, ಆಧಾರ್ ವಶ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 7:45 IST
Last Updated 30 ಸೆಪ್ಟೆಂಬರ್ 2024, 7:45 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಆನೇಕಲ್‌: ಹೆಸರು ಬದಲಿಸಿಕೊಂಡು ಆರು ವರ್ಷಗಳಿಂದ ಜಿಗಣಿ ಬಳಿಯ ರಾಜಾಪುರದಲ್ಲಿ ನೆಲಸಿದ್ದ ಪಾಕಿಸ್ತಾನದ ಒಂದೇ ಕುಟುಂಬದ ನಾಲ್ವರನ್ನು ಜಿಗಣಿ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ADVERTISEMENT

ಪಾಕಿಸ್ತಾನದ ಕರಾಚಿಯ ರಶೀದ್‌ ಅಲಿ ಸಿದ್ದಿಕಿ ಅಲಿಯಾಸ್‌ ಶಂಕರ್‌ ಶರ್ಮಾ (48), ಅಯೇಷಾ ಅಲಿಯಾಸ್‌ ಆಶಾ(38),  ಹನೀಫ್‌ ಮೊಹಮ್ಮದ್‌ ಅಲಿಯಾಸ್‌ ರಾಮ್‌ ಬಾಬು ಶರ್ಮಾ(73), ರುಬಿನಾ ಅಲಿಯಾಸ್‌ ರಾಣಿ (61) ಬಂಧಿತರು.

ಈ ನಾಲ್ವರಿಗೆ ಸಹಕಾರ ನೀಡಿದ ಆರೋಪದ ಮೇಲೆ ಮುಂಬಯಿ ನಿವಾಸಿ ಫರ್ವೇಜ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಬಂಧನಕ್ಕೆ ಜಿಗಣಿ ಪೊಲೀಸರು ಬಲೆ ಬೀಸಿದ್ದಾರೆ. 

ಕರಾಚಿ ಬಳಿಯ ಲಿಯಾ ಕತಾಬ್‌ ಗ್ರಾಮದ ರಷೀದ್‌ ಅಲಿಗೆ ಲಾಹೋರ್‌ನ ಆಯೇಷಾ 2011ರಲ್ಲಿ ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದರು. ನಂತರ ಅವರು ಮದುವೆಯಾಗಿದ್ದರು.

ಮುಸ್ಲಿಂ ಧರ್ಮಗುರುಗಳ ದೌರ್ಜನ್ಯದಿಂದ ಬೇಸತ್ತು ಪಾಕಿಸ್ತಾನ ತೊರೆದು ಪತ್ನಿಯೊಂದಿಗೆ ಬಾಂಗ್ಲಾದೇಶಕ್ಕೆ ಹೋಗಿ ನೆಲೆಸಿದ್ದಾಗಿ ರಶೀದ್‌ ಪೊಲೀಸರಿಗೆ ತಿಳಿಸಿದ್ದಾನೆ. 

ಮೆಹ್ದಿ ಫೌಂಡೇಷನ್‌ನಿಂದ ಹಣ ಪಡೆದು ದಂಪತಿ ಬಾಂಗ್ಲಾದೇಶದಲ್ಲಿ ಧರ್ಮ ಪ್ರಚಾರ ಮಾಡುತ್ತಿದ್ದರು. ಭಾರತದಲ್ಲಿಯೂ ಧರ್ಮಪ್ರಚಾರ ಮಾಡುವಂತೆ ಮೆಹ್ದಿ ಫೌಂಡೇಷನ್‌ ಸೂಚಿಸಿದ ನಂತರ ಪಶ್ಚಿಮ ಬಂಗಾಳದ ಮೂಲಕ ಭಾರತಕ್ಕೆ ನುಸುಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯರ ಹೆಸರಿನಲ್ಲಿ ಆಧಾರ್‌, ಪಾಸ್‌ಪೋರ್ಟ್:  ಆರೋಪಿಗಳು ಏಜೆಂಟ್‌ರಿಗೆ ಹಣ ನೀಡಿ ಆಧಾರ್‌ ಸೇರಿದಂತೆ ವಿವಿಧ ದಾಖಲೆ ಪಡೆದಿದ್ದರು. ಅವನ್ನು ಬಳಸಿ ದೆಹಲಿಯ ಫತ್ತೇಪುರದಲ್ಲಿ ಕೆಲ ಸಮಯ ವಾಸವಿದ್ದರು.

2018ರಲ್ಲಿ ಬೆಂಗಳೂರಿನ ವಾಸೀಂ ಮತ್ತು ಅಲ್ತಾಫ್‌ ಪರಿಚಯ ವಾಗಿದ್ದರು. ಅವರ ನೆರವು ಪಡೆದು ಅತ್ತೆ, ಮಾವನೊಂದಿಗೆ ಬೆಂಗಳೂರಿಗೆ ಬಂದ ರಶೀದ್‌ ದಂಪತಿ ಜಿಗಣಿ ಸಮೀಪದ ರಾಜಾಪುರದ ಅನಘ ಬಡಾವಣೆಯಲ್ಲಿ ಆರು ವರ್ಷದಿಂದ ವಾಸವಿದ್ದರು. ಬಂಧಿತರಿಂದ ಪೊಲೀಸರು ಆಧಾರ್‌, ಭಾರತದ ಪಾಸ್‌ ಪೋರ್ಟ್‌, ಪ್ಯಾನ್ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ ವಶಪಡಿಸಿ ಕೊಂಡಿದ್ದಾರೆ.  

ರಶೀದ್‌ ಅಲಿ ಸಿದ್ದಿಕಿಯು ಶಂಕರ್‌ ಶರ್ಮಾ, ಆತನ ಪತ್ನಿ ಆಯೇಷಾ, ಆಶಾ ಶರ್ಮಾ, ಅತ್ತೆ ರುಬಿನಾ, ರಾಣಿ ಶರ್ಮಾ ಮತ್ತು ಮಾವ ಮೊಹಮ್ಮದ್‌ ಯೂನಸ್‌, ರಾಮಬಾಬು ಶರ್ಮಾ ಹೆಸರಿನಲ್ಲಿ ಆಧಾರ್‌ ಹಾಗೂ ಇತರ ದಾಖಲೆ ಹೊಂದಿದ್ದರು.

ಸುಳಿವು ಸಿಕ್ಕಿದ್ದು ಹೇಗೆ?

ಬಂಧಿತರ ಸಂಬಂಧಿಕರು ಈಚೆಗೆ ಚೆನ್ನೈನಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದರು. ಅವರು ನೀಡಿದ ಮಾಹಿತಿ ಆಧರಿಸಿ ಗುಪ್ತಚರ ಇಲಾಖೆಯು ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿತ್ತು.

ಈ ಮಾಹಿತಿ ಆಧರಿಸಿ ಭಾನುವಾರ ರಾತ್ರಿ ಅನಘ ಬಡಾವಣೆ ಮನೆ ಮೇಲೆ ದಾಳಿ ನಡೆಸಿದ ಜಿಗಣಿ ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆಯಿತು.

ಆರೋಪಿಗಳು ಎಲ್ಲಿಂದ ಮತ್ತು ಹೇಗೆ ದಾಖಲೆಗಳನ್ನು ಪಡೆದರು ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಈ ಕುಟುಂಬ ಬೆಂಗಳೂರಿನಲ್ಲಿ  ಯಾವ ಉದ್ದೇಶದಿಂದ ನೆಲಸಿತ್ತು. ಇಲ್ಲಿ ಏನು ಮಾಡುತ್ತಿತು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಮನೆಯನ್ನು ಸಂಪೂರ್ಣ ಜಾಲಾಡಿದಾಗ, ದಾಖಲೆಗಳಲ್ಲಿ ಹಿಂದೂ ಹೆಸರಿದ್ದರೂ ಮನೆಯ ಒಳಗೆ ಮುಸ್ಲಿಂ ಧರ್ಮಕ್ಕೆ ಸಂಬಂಧಿಸಿದ ಭಾವಚಿತ್ರ, ಪುಸ್ತಕ ಮತ್ತು ಬರಹ ಇದ್ದವು ಎಂದು ಕೇಂದ್ರ ವಲಯ ಐಜಿಪಿ ಲಾಭೂರಾಮ್‌ ಮಾಹಿತಿ ನೀಡಿದರು. ಆರೋಪಿಗಳ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿ, ಅಕ್ರಮ ಒಳ ನುಸುಳುವಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.  ಜಿಗಣಿ ಕೈಗಾರಿಕ ಪ್ರದೇಶ ವ್ಯಾಪ್ತಿಯಲ್ಲಿ ಸೆ.26ರಂದು ಅಸ್ಸಾಂ ಶಂಕಿತ ಉಗ್ರನೊಬ್ಬನನ್ನು ಬಂಧಿಸಲಾಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.