ADVERTISEMENT

ಬ್ಯಾಂಕ್‌ ದಾಖಲೆ ಪಡೆದು ವಂಚನೆ: ಆರೋಪಿಯ ಬಂಧನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2023, 21:35 IST
Last Updated 26 ನವೆಂಬರ್ 2023, 21:35 IST
ಜೈಲು
ಜೈಲು   

ಬೆಂಗಳೂರು: ಬ್ಯಾಂಕ್‌ಗಳಲ್ಲಿ ಸಾಲ ಕೊಡಿಸುವುದಾಗಿ ಉದ್ಯಮಿಗಳಿಂದ ದಾಖಲೆ ಪಡೆದು ವಂಚಿಸುತ್ತಿದ್ದ ಯುಸೂಫ್ ಎಂಬ ಆರೋಪಿಯನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.

ಹೋಟೆಲ್ ಉದ್ಯಮಿ ಶಾಜಿ ಕೃಷ್ಣನ್ ಎಂಬುವರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಅವರಿಂದ ದಾಖಲೆಗಳನ್ನು ಪಡೆದುಕೊಂಡಿದ್ದ. ಬಳಿಕ, ಕೃಷ್ಣನ್ ಅವರನ್ನು ಬ್ಯಾಂಕ್‌ಗೆ ಕರೆದೊಯ್ದು ಅರ್ಜಿಗಳಿಗೆ ಸಹಿ ಮಾಡಿಸಿಕೊಂಡಿದ್ದ. ₹2.5 ಕೋಟಿ ಸಾಲ ಪಡೆದುಕೊಂಡು ಸಾಲದ ಕಂತು ಕಟ್ಟುತ್ತಿರಲಿಲ್ಲ. ಕೃಷ್ಣನ್‌ ಅವರು ಬ್ಯಾಂಕ್‌ ತೆರಳಿ ವಿಚಾರಣೆ ನಡೆಸಿದಾಗ ಸಾಲದ ಕಂತು ಪಾವತಿ ಮಾಡದಿರುವುದು ಗೊತ್ತಾಗಿತ್ತು. ಶಾಜಿ ಕೃಷ್ಣನ್‌ ನೀಡಿದ ದೂರು ಆಧರಿಸಿ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ಹೇಳಿದರು.

ADVERTISEMENT

‘ಆರೋಪಿ ಯುಸೂಫ್‌, ರಾಜಕೀಯ ಮುಖಂಡರು ಹಾಗೂ ಬ್ಯಾಂಕ್‌ ವ್ಯವಸ್ಥಾಪಕ ಪರಿಚಯಸ್ಥರು ಎಂದು ಹೇಳಿಕೊಂಡು ಓಡಾಟ ನಡೆಸುತ್ತಿದ್ದ. ಸರ್ಕಾರದಲ್ಲಿ ಉದ್ಯಮಕ್ಕೆ ಸಂಬಂಧಿಸಿದ ಕೆಲಸ ಮಾಡಿಸಿ ಕೊಡುವುದಾಗಿ ನಂಬಿಸುತ್ತಿದ್ದ. ಹೀಗಾಗಿ ಕೆಲವು ಸಚಿವರು ಹಾಗೂ ಅಧಿಕಾರಿಗಳಿಗೆ ಕೆಲಸ ಮಾಡಿಕೊಡಲು ಹಣ ಕೊಡಬೇಕೆಂದು ಉದ್ಯಮಿಗಳಿಂದ ಹಣ ಪಡೆದುಕೊಂಡಿದ್ದಾನೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಅಲ್ಲದೇ ಟ್ರಾವೆಲ್ಸ್‌ ಕಂಪನಿ ಮಾಲೀಕರೊಬ್ಬರಿಗೆ ಜಿಎಸ್‌ಟಿ ಕಮಿಷನರ್ ಹೆಸರಲ್ಲಿ ವಂಚನೆ ಎಸಗಿದ್ದ’ ಎಂದು ಪೊಲೀಸರು ಹೇಳಿದರು.

ಬಿ.ವೈ.ವಿಜಯೇಂದ್ರ ಹೆಸರು ಬಳಸಿ ವಂಚನೆ: ‘ಆರೋಪಿಯು ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಹೆಸರು ಹೇಳಿಕೊಂಡು ಕೆಲವರಿಂದ ಹಣ ಪಡೆದು ವಂಚಿಸಿದ್ದಾನೆ. ಬಿಜೆಪಿ ಹೈಕಮಾಂಡ್‌ ನಾಯಕರು ತನಗೆ ಪರಿಯವಿದ್ದು, ರಾಜಕೀಯವಾಗಿ ಕೆಲಸ ಮಾಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ್ದಾನೆ. ಯೂಸೆಫ್‌ ಉದ್ಯಮಿಗಳಿಗೆ ಸಮಸ್ಯೆ ತಿಳಿದುಕೊಂಡು ಬಳಿಕ ಅವರ ಸ್ನೇಹ ಬೆಳೆಸುತ್ತಿದ್ದ. ನಂತರ ಸಹಾಯ ಮಾಡುವ ನೆಪದಲ್ಲಿ ಹಣ ಪಡೆದು ವಂಚಿಸುತ್ತಿದ್ದ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.