ಬೆಂಗಳೂರು: ಆಕ್ಸಿಸ್ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕ ಕೆಲಸ ಕೊಡಿಸುವ ಆಮಿಷವೊಡ್ಡಿ ₹ 10 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸ್ಥಳೀಯ ನಿವಾಸಿಯಾಗಿರುವ 28 ವರ್ಷದ ಯುವಕ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ವೆಂಕಟರಾವ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕಂಪನಿಯೊಂದರಲ್ಲಿ ಮಾರುಕಟ್ಟೆ ಪ್ರತಿನಿಧಿಯಾಗಿ ದೂರುದಾರ ಕೆಲಸ ಮಾಡುತ್ತಿದ್ದರು. ಆರೋಪಿ ವೆಂಕಟರಾವ್ ಅವರ ಮನೆಯಲ್ಲಿ ಹಲವು ವರ್ಷ ಬಾಡಿಗೆಗೆ ಇದ್ದರು. ಕೆಲ ವರ್ಷಗಳ ಹಿಂದೆ ಮನೆ ಖಾಲಿ ಮಾಡಿ ಬೇರೆಡೆ ನೆಲೆಸಿದ್ದರು. ಆಕ್ಸಿಸ್ ಬ್ಯಾಂಕ್‌ನ ಅಧಿಕಾರಿ ಎಂಬುದಾಗಿ ಹೇಳಿದ್ದ ವೆಂಕಟರಾವ್, ದೂರುದಾರರಿಗೆ ಸಹಾಯಕ ವ್ಯವಸ್ಥಾಪಕ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದರು.’
‘ಆರೋಪಿ ಮಾತು ನಂಬಿದ್ದ ದೂರುದಾರ, ಹಂತ ಹಂತವಾಗಿ ₹ 10 ಲಕ್ಷ ನೀಡಿದ್ದರು. ಹಣ ಪಡೆದಿದ್ದ ಆರೋಪಿ, ಯಾವುದೇ ಕೆಲಸ ಕೊಡಿಸಿಲ್ಲ. ಹಣ ವಾಪಸು ಕೇಳಿದ್ದಕ್ಕೆ ಬೆದರಿಕೆಯೊಡ್ಡಿರುವುದಾಗಿ ದೂರುದಾರರು ಆರೋಪಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.