ಬೆಂಗಳೂರು: ವೃದ್ಧೆಯೊಬ್ಬರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಲ್ಲಿ ₹3 ಕೋಟಿ ಸಾಲ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ರಾಕಲೈನ್ ವೆಂಕಟೇಶ್ ಅವರ ಪುತ್ರ ಅಭಿಲಾಷ್ ಅವರನ್ನು ಸಿಸಿಬಿ ಪೊಲೀಸರು ಶನಿವಾರ ವಿಚಾರಣೆ ನಡೆಸಿದರು.
ಪುಟ್ಟೇನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು, ಐವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಬ್ಯಾಂಕ್‌ವೊಂದರ ವ್ಯವಸ್ಥಾಪಕಿಗೆ ಹಾಗೂ ಅಭಿಲಾಷ್‌ಗೆ ವಿಚಾರಣೆಗಾಗಿ ನೋಟಿಸ್ ನೀಡಿದ್ದರು.
ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಶನಿವಾರ ಬೆಳಿಗ್ಗೆ 11 ಗಂಟೆಗೆ ಹಾಜರಾದ ಅಭಿಲಾಷ್ ವಿಚಾರಣೆ ಎದುರಿಸಿದರು. ಎಸಿಪಿ ಹಾಗೂ ಇನ್‌ಸ್ಪೆಕ್ಟರ್ ನೇತೃತ್ವದ ತಂಡಗಳು, ಅಭಿಲಾಷ್ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು.
ವಿಚಾರಣೆ ಮುಗಿಯುತ್ತಿದ್ದಂತೆ ಸಿಸಿಬಿ ಕಚೇರಿಯಿಂದ ಹೊರಬಂದ ಅಭಿಲಾಷ್, ಹಿಂಬದಿ ಗೇಟ್ ಮೂಲಕ ತಮ್ಮ ಕಾರಿನಲ್ಲಿ ಹೊರಟು ಹೋದರು.
ಅಭಿಲಾಷ್ ಕಂಪನಿ ಖಾತೆಗೆ ಹಣ ವರ್ಗಾವಣೆ: ‘ವೃದ್ಧೆ ಹೆಸರಿನಲ್ಲಿ ಸೃಷ್ಟಿಸಿದ್ದ ನಕಲಿ ದಾಖಲೆ ಬಳಸಿ ಬ್ಯಾಂಕ್‌ವೊಂದರಲ್ಲಿ ₹1 ಕೋಟಿ ಸಾಲ ಪಡೆಯಲಾಗಿದೆ. ಅಭಿಲಾಷ್ ಪಾಲುದಾರಿಕೆಯ ಕಂಪನಿಯ ಖಾತೆಗೆ ಸಾಲದ ಮೊತ್ತ ವರ್ಗಾವಣೆ ಆಗಿದೆ. ಈ ಬಗ್ಗೆ ಅಭಿಲಾಷ್‌ನನ್ನು ವಿಚಾರಣೆ ನಡೆಸಿ, ವಾಪಸು ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಮೂರು ಬ್ಯಾಂಕ್‌ಗಳಲ್ಲಿ ಪ್ರತ್ಯೇಕವಾಗಿ ಸಾಲ ಪಡೆಯಲಾಗಿದೆ. ಈ ಪೈಕಿ ಒಂದು ಬ್ಯಾಂಕ್‌ನಲ್ಲಿ ಅಭಿಲಾಷ್ ಹಾಗೂ ಇತರರು ಸಾಲ ಪಡೆದಿರುವ ಮಾಹಿತಿ ಇದೆ. ಇದಕ್ಕಾಗಿ ಹಲವರು ಕಮಿಷನ್ ಸಹ ಪಡೆದಿದ್ದಾರೆ. ಎಲ್ಲರನ್ನೂ ವಿಚಾರಣೆ ನಡೆಸಬೇಕಿದೆ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.