ಬೆಂಗಳೂರು:ನಟಿ ಪ್ರಣೀತಾ ಸುಭಾಷ್ ಹೆಸರಿನಲ್ಲಿ 'ಎಸ್‌ಬಿ ಗ್ರೂಪ್ ಆ್ಯಂಡ್ ಡೆವಲಪರ್ಸ್' ಕಂಪನಿ ವ್ಯವಸ್ಥಾಪಕರಿಂದ ₹ 13.50 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕೆ. ಅಮರನಾಥ್ ರೆಡ್ಡಿ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಜುನಾಯತ್, ವರ್ಷಾ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
ದೂರಿನ ವಿವರ: ‘ನಮ್ಮ ಕಂಪನಿಗೆ ಬ್ರ್ಯಾಂಡ್ ಅಂಬಾಸಿಡರ್ ಅಗತ್ಯವಿತ್ತು. ಸ್ನೇಹಿತ ಪ್ರಶಾಂತ್ ಎಂಬುವರ ಮೂಲಕ ಪರಿಚಯವಾಗಿದ್ದ ಆರೋಪಿ ಜುನಾಯತ್, ‘ನಟಿ ಪ್ರಣೀತಾ ಅವರನ್ನು ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಸುತ್ತೇನೆ. ಒಪ್ಪಂದ ಪತ್ರಕ್ಕೆ ಅವರಿಂದಲೇ ಸಹಿ ಮಾಡಿಸಿಕೊಡುತ್ತೇನೆ’ ಎಂದಿದ್ದ. ಇದೇ 10ರಂದು ಹೋಟೆಲೊಂದಕ್ಕೆ ಆರೋಪಿ ವರ್ಷಾ ಎಂಬಾಕೆಯನ್ನು ಕರೆತಂದಿದ್ದ ಜುನಾಯತ್, ಆಕೆ ಪ್ರಣೀತಾ ಅವರ ವ್ಯವಸ್ಥಾಪಕಿ ಎಂದು ಪರಿಚಯಿಸಿದ್ದ. ನಟಿಗೆ ಮುಂಗಡವಾಗಿ ಹಣ ಬೇಕೆಂದು ಹೇಳಿ ಇಬ್ಬರೂ ₹13.50 ಲಕ್ಷ ಪಡೆದಿದ್ದರು. ಅದಾದ ನಂತರ ಹೋಟೆಲ್‌ನ ಕೊಠಡಿಗೆ ಹೋಗಿ ಬರುವುದಾಗಿ ಹೇಳಿಹೋದ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದು ದೂರಿನಲ್ಲಿ ಅಮರನಾಥ್ ರೆಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.