ADVERTISEMENT

Infosys ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೆಸರಿನಲ್ಲಿ ವಂಚನೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2023, 20:17 IST
Last Updated 16 ಅಕ್ಟೋಬರ್ 2023, 20:17 IST
ಬಂಧನ (ಪ್ರಾತಿನಿಧಿಕ ಚಿತ್ರ)
ಬಂಧನ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪಿ ಅರುಣ್ ಸುದರ್ಶನ್‌ನನ್ನು (40) ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಾಜಾಜಿನಗರ ನಿವಾಸಿ ಅರುಣ್ ಸುದರ್ಶನ್, ಕಾರ್ಯಕ್ರಮ ಸಂಘಟನಾ ಸಂಸ್ಥೆ ನಡೆಸುತ್ತಿದ್ದ. ಸುಧಾಮೂರ್ತಿ ಅವರ ಸಹಾಯಕರು ನೀಡಿದ್ದ ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋ‍ಪಿ ಅರುಣ್, ಸಂಬಂಧಿಕರಾದ ಶ್ರುತಿ ಮೇಲೆ ದ್ವೇಷ ಸಾಧಿಸುತ್ತಿದ್ದ. ಅವರ ಹೆಸರಿಗೆ ಚ್ಯುತಿ ತರಲು ಸಂಚು ರೂಪಿಸಿ ಕೃತ್ಯ ಎಸಗಿದ್ದ. ಆರಂಭದಲ್ಲಿ, ಶ್ರುತಿ ಹಾಗೂ ಲಾವಣ್ಯಾ ಆರೋಪಿ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ನಡೆಸಿದಾಗ, ಅರುಣ್ ತಪ್ಪೊಪ್ಪಿಕೊಂಡ’ ಎಂದು ತಿಳಿಸಿವೆ.

ADVERTISEMENT

‘ಶ್ರುತಿ ಕುಟುಂಬ ಅಮೆರಿಕದಲ್ಲಿದೆ. ಅಲ್ಲಿಯ ಕನ್ನಡ ಕೂಟದ ಕಾರ್ಯಕ್ರಮ ನಡೆಸಲು ಮುಂದಾಗಿದ್ದ ಶ್ರುತಿ, ಸುಧಾಮೂರ್ತಿ ಅವರನ್ನು ಕರೆತರುವಂತೆ ಆರೋಪಿ ಅರುಣ್‌ಗೆ ಹೇಳಿದ್ದರು. ಅದಕ್ಕೆ ಒಪ್ಪಿದ್ದ ಅರುಣ್, ‘ಸುಧಾಮೂರ್ತಿ ಅವರ ಆಪ್ತ ಸಹಾಯಕಿ ಲಾವಣ್ಯಾ ಜೊತೆ ಮಾತನಾಡಿದ್ದೇನೆ. ಕಾರ್ಯಕ್ರಮ ಸುಧಾಮೂರ್ತಿ ಬರುತ್ತಾರೆ’ ಎಂಬುದಾಗಿ ಹೇಳಿ ₹5 ಲಕ್ಷ ಪಡೆದಿದ್ದ.’

‘ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಶ್ರುತಿ, ಸುಧಾಮೂರ್ತಿ ಕಾರ್ಯಕ್ರಮಕ್ಕೆ 40 ಡಾಲರ್ (₹3,200) ಪ್ರವೇಶ ಶುಲ್ಕ ನಿಗದಿಪಡಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಯಕ್ರಮದ ಜಾಹೀರಾತು ಸಹ ನೀಡಲಾಗಿತ್ತು’ ಎಂದು ಹೇಳಿವೆ.

‘ಕಾರ್ಯಕ್ರಮದ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸುಧಾಮೂರ್ತಿ ಅವರ ಸಹಾಯಕರು, ಸಂಘಟಕರನ್ನು ಸಂಪರ್ಕಿಸಿದ್ದರು. ಸುಧಾಮೂರ್ತಿ ಕರೆತರುವುದಾಗಿ ಹೇಳಿರುವ ಶ್ರುತಿ ಹಾಗೂ ಲಾವಣ್ಯಾ, ಹಣ ಪಡೆದಿರುವುದಾಗಿ ಸಂಘಟಕರು ಹೇಳಿದ್ದರು. ಅವಾಗಲೇ ಸಹಾಯಕರು, ಶ್ರುತಿ ಹಾಗೂ ಲಾವಣ್ಯಾ ಮೇಲೆ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಶ್ರುತಿ ಹಾಗೂ ಲಾವಣ್ಯ ಮೇಲೆ ಅನುಮಾನವಿತ್ತು. ಕೆಲ ಪುರಾವೆಗಳನ್ನು ಪರಿಶೀಲಿಸಿದಾಗ, ಅರುಣ್‌ ಕೃತ್ಯ ತಿಳಿಯಿತು. ಸುಳ್ಳು ಹೇಳಿ ಹಣ ಪಡೆದು ಶ್ರುತಿ ಅವರನ್ನು ಪ್ರಕರಣದಲ್ಲಿ ಸಿಲುಕಿ ಜೈಲಿಗೆ ಕಳುಹಿಸುವ ಉದ್ದೇಶವಿತ್ತು ಎಂಬುದಾಗಿ ಆರೋಪಿ ಹೇಳಿಕೊಂಡಿದ್ದಾನೆ’ ಎಂದು ಮೂಲಗಳು ವಿವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.