ADVERTISEMENT

ಉಚಿತ ವಿದ್ಯುತ್: ಸೌರ ಮೇಲ್ಛಾವಣಿ ಅಳವಡಿಕೆಗೆ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 20:48 IST
Last Updated 7 ಜನವರಿ 2024, 20:48 IST
   

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಯೋಜನೆ ಜಾರಿಯಿಂದಾಗಿ ಮನೆಗಳಿಗೆ ’ಸೌರ ಮೇಲ್ಛಾವಣಿ’ ಅಳವಡಿಕೆಗೆ ನಗರದ ಜನರು ನಿರಾಸಕ್ತಿ ತೋರುತ್ತಿದ್ದಾರೆ.

‘ಗೃಹಜ್ಯೋತಿ’ ಯೋಜನೆಯಿಂದ ಕೆಲವರು ವಿದ್ಯುತ್‌ ಬಳಕೆಯಲ್ಲಿ ಶೂನ್ಯ ಬಿಲ್‌ ಪಡೆದರೆ, ಹಲವರು ಶುಲ್ಕದಲ್ಲಿ ಸಬ್ಸಿಡಿ ಪಡೆಯುತ್ತಿದ್ದಾರೆ. ಇದರಿಂದಾಗಿ ಗೃಹಬಳಕೆ ವಿದ್ಯುತ್‌ಗಾಗಿ ಸೌರ ಮೇಲ್ಛಾವಣಿ ಅಳವಡಿಸುವವರ ಸಂಖ್ಯೆ ಕಡಿಮೆಯಾಗಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಕರ ಸಂಘದ ಪ್ರಕಾರ ಗೃಹಜ್ಯೋತಿ ಯೋಜನೆ ಪ್ರಾರಂಭವಾದಾಗಿನಿಂದ ಸೌರ ಮೇಲ್ಛಾವಣಿ ಅಳವಡಿಕೆಗೆ ನಗರದ ಜನರು ಆಸಕ್ತಿ ತೋರುತ್ತಿಲ್ಲ. 

‘ಸೌರ ಮೇಲ್ಛಾವಣಿ ಅಳವಡಿಕೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳು ಅಂತಿಮ ಹಂತದಲ್ಲಿದ್ದರೆ, ಇನ್ನೂ ಕೆಲವು ಮಾತುಕತೆಯ ಹಂತದಲ್ಲಿದ್ದವು. ಈಗ ಗೃಹಜ್ಯೋತಿ ಯೋಜನೆ ಪ್ರಾರಂಭವಾದ ಬಳಿಕ ಈ ಎಲ್ಲ ಯೋಜನೆಗಳಿಗೂ ಹಿನ್ನಡೆಯಾಗಿದೆ. ಶೂನ್ಯ ಬಿಲ್‌ನಿಂದಾಗಿ ಸೌರ ಮೇಲ್ಛಾವಣಿ ಅಳವಡಿಕೆ ಅಗತ್ಯವಿಲ್ಲವೆಂದು ಗ್ರಾಹಕರು ತಿಳಿಸುತ್ತಿದ್ದಾರೆ’ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಕರ ಸಂಘದ ಉಪಾಧ್ಯಕ್ಷ ಕೆ.ಎಲ್‌.ಎಚ್ ರಾಯ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕಳೆದ ನಾಲ್ಕು ತಿಂಗಳಲ್ಲಿ ಕನಿಷ್ಠ 15 ಮಂದಿ ಸೌರ ಮೇಲ್ಛಾವಣಿ ಅಳವಡಿಕೆಯಿಂದ ಹಿಂದೆ ಸರಿದಿದ್ದಾರೆ’ ಎಂದು ಸೌರ ಮೇಲ್ಛಾವಣಿ ಮಾರಾಟಗಾರರೊಬ್ಬರು ತಿಳಿಸಿದರು. 

‘ಈ ಉದ್ಯಮವು ಶೇ 30ರಷ್ಟು ಕುಸಿತ ಕಂಡಿದೆ. ನಿರ್ಮಾಣ ಹಂತದ ಮನೆಗಳಿಗೆ ಸೌರ ಮೇಲ್ಛಾವಣಿ ಅಳವಡಿಕೆಗೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುತ್ತಿದ್ದರು. ಈಗ ಉಚಿತ ವಿದ್ಯುತ್‌ನಿಂದಾಗಿ ಅಂತಹ ಗ್ರಾಹಕರು ಸೌರ ಮೇಲ್ಛಾವಣಿ ಅಳವಡಿಕೆಗೆ ಆಸಕ್ತಿ ತೋರುತ್ತಿಲ್ಲ’ ಎಂದು ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಕರು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.