ಬೆಂಗಳೂರು: ಲಾಕ್‍ಡೌನ್‍ನಿಂದ ದೂರಾಗಿದ್ದ ಸ್ನೇಹಿತರೆಲ್ಲಾ ಒಗ್ಗೂಡಲು ವಾಟ್ಸ್ಆ್ಯಪ್ ಗುಂಪುಗಳು ಹುಟ್ಟಿದ ಬಗೆ ಹಾಗೂ ಸ್ನೇಹಿತರ ಮರುಬೆಸುಗೆ ಕ್ಷಣಗಳನ್ನು 'ಸ್ನೇಹಿತರ ದಿನ'ದ ಅಂಗವಾಗಿ ಪ್ರಜಾವಾಣಿ ಆಹ್ವಾನಿಸಿತ್ತು. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.
ಕಾಲೇಜಿಗೆ ಅಳಿಲು ಸೇವೆ
ಓದು ಬರಹ ಕಲಿಸಿದ ಕೋಟದ ವಿವೇಕ ಪಿ.ಯು ಕಾಲೇಜಿನಿಗೆ ಏನಾದರೂ ಕೊಡುಗೆ ನೀಡುವ ಇಂಗಿತದೊಂದಿಗೆ ರೂಪುಗೊಂಡ ವಾಟ್ಸ್ಆ್ಯಪ್ ಗುಂಪು ನಮ್ಮದು. ನನಗೆ 6 ತಿಂಗಳ ಹಸುಗೂಸಿದ್ದರೂ 25 ವರ್ಷಕ್ಕಿಂತ ಮಿಗಿಲಾದ ಗೆಳೆತನವನ್ನು ಸೇರಿಸಿದೆ. ನಮ್ಮೆಲ್ಲರ ಗುರಿಯಂತೆ ಶಾಲೆಯ ಉದ್ದೇಶಿತ ಯೋಜನೆಗೆ ಊಹೆಗೂ ಮೀರಿ ಧನ ಸಂಗ್ರಹವಾಯಿತು. ಉಳಿದ ಹಣವನ್ನು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ನಾವು ಕಲಿತ ಶಾಲೆಗೆ ಅಳಿಲು ಸೇವೆ ಮಾಡಲು ಸಹಕರಿಸಿತು. 20 ವರ್ಷದಿಂದ ದೂರವೇ ಉಳಿದಿದ್ದರೂ ಈ ಗುಂಪು ನಮ್ಮನ್ನು ಒಗ್ಗೂಡಿಸಿದೆ.
-ರಂಜನಿ, ಕುಮಾರಸ್ವಾಮಿ ಬಡಾವಣೆ
ಗೆಳೆತನಕ್ಕೆ ಅಡ್ಡಿಯಾಗದ ಕೊರೊನಾ
9 ವರ್ಷಗಳ ಸ್ನೇಹಕ್ಕೆ ಸಾಕ್ಷಿಯಾಗಿ ಅಂಜನಾ, ಮಧುರಾ, ಲಿಖಿತಾ, ಗೌತಮಿ ಹಾಗೂ ನಾನು ಸೇರಿ ಆಯ್ದ ಐದು ಮಂದಿಯೊಂದಿಗೆ ವಾಟ್ಸ್ಆ್ಯಪ್ ಗುಂಪು ಮಾಡಿಕೊಂಡೆವು. ನಾವೆಲ್ಲ ಶಾಲೆಯಿಂದಲೇ ಗೆಳೆಯರು. ಈ ಕೊರೊನಾ ಸ್ಥಿತಿಯಿಂದ ನಾನು ನನ್ನ ಗೆಳೆಯರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ, ವಾಟ್ಸ್ಆ್ಯಪ್ ಗುಂಪಿನಿಂದ ಕೊರೊನಾ ನಮ್ಮ ಗೆಳೆತನಕ್ಕೆ ಅಡ್ಡಿಯಾಗಲಿಲ್ಲ. ಪ್ರತಿದಿನ ಸಂಜೆ ಎಲ್ಲರೂ ವಿಡಿಯೊ ಕರೆ ಮಾಡಿ ಮಾತನಾಡುತ್ತೇವೆ.
-ಶ್ರೇಷ್ಠಾ, ರಾಜಗೋಪಾಲನಗರ
ಮದುವೆಯಲ್ಲಿ ಹುಟ್ಟಿಕೊಂಡ ಗುಂಪು
2002ರ ಎಸ್ಸೆಸ್ಸೆಲ್ಸಿ ಬ್ಯಾಚ್ ನಮ್ಮದು. ಎಲ್ಲರೂ ಒಂದೇ ಕಾಲೇಜಿಗೆ ಸೇರೋಣ ಹಾಗೂ ವರ್ಷದಲ್ಲಿ ಎರಡು ಮೂರು ಬಾರಿ ಭೇಟಿಯಾಗೋಣ ಎಂದುಕೊಂಡು ಆಗಿನ ಲ್ಯಾಂಡ್‍ಲೈನ್ ಸಂಖ್ಯೆಗಳನ್ನು ಹಂಚಿಕೊಂಡು, ಒಬ್ಬರಿಗೊಬ್ಬರು ವಿದಾಯ ಹೇಳಿಕೊಂಡೆವು. ಆದರೆ, ಅಂದುಕೊಂಡಂತೆ ಎಲ್ಲರೂ ಸೇರಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ಸ್ನೇಹಿತೆಯ ಮದುವೆಯಲ್ಲಿ ವಾಟ್ಸ್ಆ್ಯಪ್ ಗುಂಪು ರಚಿಸಲು ನಿರ್ಧರಿಸಿದೆವು. ಮರೆಯಾಗಿದ್ದ ಸ್ನೇಹಿತರೆಲ್ಲಾ ಈಗ ಸಮೀಪದಲ್ಲೇ ಇರುವಂತಿದೆ.
ಜಿ.ವೆಂಕಟೇಶ್, ಸುಂಕದಕಟ್ಟೆ
'ಸ್ನೇಹಲೋಕ'ಕ್ಕೆ ಮರುಪ್ರವೇಶ
ಎಸ್ಸೆಸ್ಸೆಲ್ಸಿ ಬಳಿಕ ಮಧುರ ಜೇನುಗೂಡಿನಂತಿದ್ದ ನಮ್ಮ 'ಸ್ನೇಹಲೋಕ' ವಿವಿಧ ದಿಕ್ಕುಗಳಲ್ಲಿ ಚದುರಿ ಹೋಯಿತು. ಹಾಸ್ಯ ಮಾಡುವುದರಲ್ಲಿ ಮೇಲುಗೈ ಸಾಧಿಸಿದ್ದ ಮದನ್, 'ಸ್ನೇಹಲೋಕ' ಶೀರ್ಷಿಕೆಯಡಿ ಹುಟ್ಟುಹಾಕಿದ ವಾಟ್ಸ್ಆ್ಯಪ್ ಗ್ರೂಪ್‍ನಲ್ಲಿ ಸ್ನೇಹಿತರ ದಂಡು ಸೇರಿತು. ಹಿಂಡಾಗಿ ಬರುತ್ತಿದ್ದ ಸಂದೇಶಗಳ ಬೇಸರದಿಂದ ಗುಂಪಿನಿಂದ ಹೊರಬಂದೆ. ಕೊರೊನಾದಿಂದ ಮತ್ತೆ ಗುಂಪಿನೊಳಗೆ ಪ್ರವೇಶ ಪಡೆದೆ. ಗೆಳೆಯರೆಲ್ಲಾ ನನ್ನೊಂದಿಗೇ ಇರುವ ಭಾವನೆಯಲ್ಲಿದ್ದೇನೆ.
-ಸಂತೋಷ್, ಎಲೆಕ್ಟ್ರಾನಿಕ್ ಸಿಟಿ
ಭೋಜನದಿಂದ ವಾಟ್ಸ್ಆ್ಯಪ್ ನತ್ತ
ಲಾಕ್‍ಡೌನ್‍ಗೂ ಕೆಲ ದಿನಗಳ ಮುನ್ನ ನನ್ನ ಹೈಸ್ಕೂಲ್ ಸಹಪಾಠಿ ಅಮೆರಿಕದಿಂದ ಬಂದ ವಿಚಾರ ತಿಳಿಯಿತು. ಸ್ನೇಹಿತರೆಲ್ಲಾ ಒಗ್ಗೂಡಿ, ಅವನನ್ನು ಭೇಟಿ ಮಾಡಿದೆವು. ಹೋಟೆಲ್‍ನಲ್ಲಿ ಎಲ್ಲರೂ ಭೋಜನದ ವೇಳೆ ಹರಟೆ ಹೊಡೆಯುವಾಗ, ವಾಟ್ಸ್ಆ್ಯಪ್ ಗುಂಪು ರಚಿಸುವ ಆಲೋಚನೆ ತೋಚಿತು. ಅದರಂತೆ, 'ಮಹಾಜನ ಹೈಸ್ಕೂಲ್ ಫ್ರೆಂಡ್ಸ್' ಎಂಬ ನಾಮಫಲಕವನ್ನು ಗುಂಪಿಗೆ ನೇತು ಹಾಕಿದೆವು. ಈಗ ಸ್ನೇಹಿತರೊಂದಿಗೆ ಪ್ರತಿನಿತ್ಯ ವಿಚಾರ ವಿನಿಮಯ, ಹಳೆಯ ಫೊಟೊ ಹಂಚಿಕೊಳ್ಳುವುದು, ವಿಶೇಷ ಸಮಾಚಾರವನ್ನು ಪರಸ್ಪರ ಚರ್ಚಿಸುವ ಮೂಲಕ ನಮ್ಮ ಸ್ನೇಹ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದೇವೆ.
-ವಿಜಯೇಂದ್ರ ರಾವ್, ಕನಕ ಬಡಾವಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.