ADVERTISEMENT

ಬೆಂಗಳೂರು ಕೃಷಿ ಮೇಳ‌ | ಐವತ್ತು ರೂಪಾಯಿಗೆ 'ಫ್ರೂಟ್‌ ಫ್ಲೈ ಕ್ಯಾಚರ್‌’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 21:05 IST
Last Updated 15 ನವೆಂಬರ್ 2024, 21:05 IST
‘ಫ್ರೂಟ್ ಫ್ಲೈ ಕ್ಯಾಚರ್’ ಸಾಧನ ಪ್ರದರ್ಶಿಸಿದ  ಜೇಮ್ಲ ನಾಯಕ್
‘ಫ್ರೂಟ್ ಫ್ಲೈ ಕ್ಯಾಚರ್’ ಸಾಧನ ಪ್ರದರ್ಶಿಸಿದ  ಜೇಮ್ಲ ನಾಯಕ್   

ಬೆಂಗಳೂರು: ಸೀಬೆಹಣ್ಣು ಸೇರಿ ವಿವಿಧ ಹಣ್ಣುಗಳನ್ನು ಬಾಧಿಸುವ ನೊಣವನ್ನು ನಿಯಂತ್ರಿಸಲು ಕಡಿಮೆ ವೆಚ್ಚದಲ್ಲಿ ‘ಫ್ರೂಟ್ ಫ್ಲೈ ಕ್ಯಾಚರ್’ ಎಂಬ ಸರಳವಾದ ‘ಕೀಟಾಕರ್ಷಕ’ ಸಾಧನವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

‘ಒಂದು ಪ್ಲಾಸ್ಟಿಕ್ ಡಬ್ಬಕ್ಕೆ ಎರಡೂ ಬದಿಯಲ್ಲಿ ಎರಡು ರಂಧ್ರ ಮಾಡಿ, ಅದರೊಳಗೆ ಪರಿಮಳ ಬೀರುವ(ಸೆಂಟೆಡ್‌) ಮೀಥೈಲ್‌ ಇಯುಜಿನಾಲ್ ಎಂಬ ರಾಸಾಯನಿಕವನ್ನು ಹಾಕಿ, ಜೊತೆ ಎರಡು ಹನಿ ಕೀಟನಾಶಕವನ್ನು ಸೇರಿಸಿದ್ದೇವೆ(ಯಾವ ಕೀಟನಾಶಕವನ್ನಾದರೂ ಹಾಕಬಹುದು). ಈ ಡಬ್ಬವನ್ನು ಹಣ್ಣಾಗುವ ಹಂತದಲ್ಲಿ ತೋಟಗಳ ವಿವಿಧ ಭಾಗಗಳಲ್ಲಿ ಮರಗಳಿಗೆ ಕಟ್ಟಬೇಕು. ಕೀಟಗಳು ರಾಸಾಯನಿಕದ ಪರಿಮಳಕ್ಕೆ ಆಕರ್ಷಿತವಾಗಿ ಡಬ್ಬದಲ್ಲಿ ಬಿದ್ದು ಕೀಟನಾಶಕ ಸೇವಿಸಿ ಸಾಯುತ್ತವೆ. ತಿಂಗಳಿಗೊಮ್ಮೆ ರಾಸಾಯನಿಕ ಬದಲಿಸಬೇಕು. ಒಂದು ಎಕರೆಗೆ ಇಂಥ ಆರು ಡಬ್ಬಗಳನ್ನು ಇಡಬಹುದು’ ಎಂದು ಅವರು ವಿವರಿಸಿದರು.

‘ತುಮಕೂರು, ದೊಡ್ಡಬಳ್ಳಾಪುರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ರೈತರು ‘ಫ್ಲೈ ಕ್ಯಾಚರ್’ ಉಪಕರಣ ಬಳಸಿದ್ದಾರೆ. ಕೀಟ ನಿಯಂತ್ರಣವಾಗಿದೆ ಎಂದು ಹೇಳಿದ್ದಾರೆ. ಮೇಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರು ಇದನ್ನು ಖರೀದಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮಾರುಕಟ್ಟೆಯಲ್ಲಿ ಇಂಥ ಉಪಕರಣಗಳು ಸಾಕಷ್ಟಿವೆ. ಆದರೆ, ಅವು ದುಬಾರಿ. ಇದು ತುಂಬಾ ಕಡಿಮೆ ವೆಚ್ಚದ್ದು. ರೈತರೇ, ಪ್ಲಾಸ್ಟಿಕ್ ಶೀಶೆಯನ್ನು ಉಪಯೋಗಿಸಿ, ಮೀಥೈಲ್ ಇಯುಜಿನಾಲ್ ರಾಸಾಯನಿಕ ಬಳಸಿಕೊಂಡು, ಈ ಸಾಧನ ತಯಾರಿಸಿಕೊಳ್ಳಬಹುದು’ಎಂದು‌ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.