ADVERTISEMENT

ಹಣ ದುರ್ಬಳಕೆ: 25 ವರ್ಷಗಳಾದರೂ ಕ್ರಮವಿಲ್ಲ!

61 ಪ್ರಕರಣಗಳಲ್ಲಿ ಸರ್ಕಾರದ ವಿಳಂಬ ಧೋರಣೆ ಸಿಎಜಿ ವರದಿಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 19:38 IST
Last Updated 23 ಜುಲೈ 2024, 19:38 IST
   

ಬೆಂಗಳೂರು: ಸರ್ಕಾರಿ ಅನುದಾನದ ದುರ್ಬಳಕೆ ಮತ್ತು ಸರ್ಕಾರಿ ಸಾಮಗ್ರಿಗಳ ಕಳ್ಳತನ ಮಾಡಿದ್ದ ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳು 25 ವರ್ಷಗಳಾದರೂ ಕ್ರಮ ಜರುಗಿಸಿಲ್ಲ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

2022-23ನೇ ಆರ್ಥಿಕ ವರ್ಷದಲ್ಲಿನ ರಾಜ್ಯ ಸರ್ಕಾರದ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಸಿಎಜಿ ವರದಿಯನ್ನು ವಿಧಾನಮಂಡಲದಲ್ಲಿ ಮಂಗಳವಾರ ಮಂಡಿಸಲಾಯಿತು. ₹42.88 ಕೋಟಿ ಮೊತ್ತದ ನಷ್ಟ ಉಂಟಾಗಿರುವ 61 ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ದೀರ್ಘ ಕಾಲದಿಂದಲೂ ಕ್ರಮ ಕೈಗೊಂಡಿಲ್ಲ ಎಂಬ ಉಲ್ಲೇಖ ವರದಿಯಲ್ಲಿದೆ.

39 ಪ್ರಕರಣಗಳಲ್ಲಿ ಇಲಾಖಾ ಶಿಸ್ತು ಕ್ರಮ ಮತ್ತು ಕ್ರಿಮಿನಲ್‌ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಕ್ರಮಗಳು ಆರಂಭವೇ ಆಗಿಲ್ಲ. 19 ಪ್ರಕರಣಗಳಲ್ಲಿ ಇಲಾಖಾ ವಿಚಾರಣೆ ಆರಂಭವಾಗಿದ್ದರೂ, ಅಂತಿಮಗೊಂಡಿಲ್ಲ. ಮೂರು ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ಮುಗಿದಿದ್ದರೂ, ನಷ್ಟದ ಮೊತ್ತವನ್ನು ವಸೂಲಿ ಮಾಡಿಲ್ಲ ಎಂದು ಸಿಎಜಿ ಹೇಳಿದೆ.

ADVERTISEMENT

ಆರೋಗ್ಯ ಇಲಾಖೆಯಲ್ಲಿ 25 ವರ್ಷಗಳಿಗಿಂತ ಹಳೆಯದಾದ ಹತ್ತು ಪ್ರಕರಣಗಳು ಬಾಕಿ ಇವೆ. ವೈದ್ಯಕೀಯ ಶಿಕ್ಷಣ ಮತ್ತು ಅರಣ್ಯ ಇಲಾಖೆಗಳಲ್ಲಿ ತಲಾ ಎರಡು ಪ್ರಕರಣಗಳಿದ್ದರೆ, ವಸತಿ ಇಲಾಖೆಯಲ್ಲಿ ಒಂದು ಪ್ರಕರಣ ಬಾಕಿ ಇದೆ.

‘ಲೆಕ್ಕಪರಿಶೋಧನೆಗೆ ಅಗತ್ಯ ಮಾಹಿತಿ ಒದಗಿಸದ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದೆ. ಲೆಕ್ಕಪರಿಶೋಧನೆಗೆ ಅಗತ್ಯವಿರುವ ಮಾಹಿತಿ ಒದಗಿಸುವಂತೆ ಸರ್ಕಾರದಿಂದ ಗಣನೀಯ ಪ್ರಮಾಣದ ಅನುದಾನ ಪಡೆದ ಸಂಸ್ಥೆಗಳಿಗೆ ಹಣಕಾಸು ಇಲಾಖೆ ಸೂಚನೆ ನೀಡಿದ್ದರೂ ಪಾಲಿಸುತ್ತಿಲ್ಲ. ಇದು ರಾಜ್ಯ ಸರ್ಕಾರದಲ್ಲಿ ಆಂತರಿಕ ನಿಯಂತ್ರಣ ಸಮರ್ಪಕವಾಗಿ ಇಲ್ಲದಿರುವುದು ಮತ್ತು ಮೇಲ್ವಿಚಾರಣಾ ಕಾರ್ಯವಿಧಾನದ ಕೊರತೆಯನ್ನು ಸೂಚಿಸುತ್ತದೆ’ ಎಂದು ಮಹಾಲೇಖಪಾಲರ ವರದಿ ತಿಳಿಸಿದೆ.

ಬಾರದ ಲಾಭ: 2023ರ ಮಾರ್ಚ್‌ವರೆಗೆ ರಾಜ್ಯ ಸರ್ಕಾರವು ₹72,799.77 ಕೋಟಿಗಳನ್ನು 92 ಸರ್ಕಾರಿ ಕಂಪನಿಗಳು, ನಿಗಮಗಳು, ಕೂಡು ಬಂಡವಾಳ ಕಂಪನಿಗಳು, ಸಹಕಾರ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಿತ್ತು. ಅದರಿಂದ ಕೇವಲ ₹ 25.23 ಕೋಟಿ ಲಾಭ ಗಳಿಕೆಯಾಗಿದೆ.

‘ಪ್ರತಿ ಹೂಡಿಕೆಗೂ ಲಾಭವನ್ನು ನಿರೀಕ್ಷಿಸುವುದಿಲ್ಲ. ರಾಜ್ಯದ ಜನರಿಗೆ ಮೂಲಸೌಕರ್ಯ ಒದಗಿಸುವುದು, ಉದ್ಯೋಗ ಸೃಷ್ಟಿ, ಸೇವೆ ಒದಗಿಸಲು ಸಾಮಾಜಿಕ ಉದ್ದೇಶಗಳನ್ನು ಪೂರೈಸಲು ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಹೂಡಿಕೆ ಮಾಡಲಾಗುತ್ತದೆ’ ಎಂದು ಸರ್ಕಾರವು ಸಮರ್ಥಿಸಿಕೊಂಡಿದೆ.

ಈ ಅವಧಿಯವರೆಗೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕೃಷ್ಣಾ ಭಾಗ್ಯ ಜಲ ನಿಗಮ ಸೇರಿದಂತೆ  ನಷ್ಟದಲ್ಲಿರುವ ಸಂಸ್ಥೆಗಳಲ್ಲಿ ರಾಜ್ಯ ಸರ್ಕಾರವು ₹ 43,211 ಕೋಟಿ ಹೂಡಿಕೆ ಮಾಡಿದೆ ಎಂಬುದು ವರದಿಯಲ್ಲಿದೆ.

ಪಿ.ಡಿ. ಖಾತೆಗಳಲ್ಲಿನ ಮೊತ್ತ ₹29,510 ಕೋಟಿಗೆ ಏರಿಕೆ

2020–21ನೇ ಹಣಕಾಸು ವರ್ಷದ ಅಂತ್ಯದಲ್ಲಿ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ₹3,989 ಕೋಟಿ ಠೇವಣಿ ಇತ್ತು. 2022–23ರ ಅಂತ್ಯದಲ್ಲಿ ಈ ಮೊತ್ತವು ₹29,510 ಕೋಟಿಗೆ ಏರಿಕೆಯಾಗಿತ್ತು ಎಂಬುದನ್ನು ಸಿಎಜಿ ವರದಿ ಹೊರಗೆಡವಿದೆ.

ವಾಸ್ತವದಲ್ಲಿ 395 ವೈಯಕ್ತಿಕ ಠೇವಣಿ ಖಾತೆಗಳಿದ್ದವು. ಆದರೆ 85 ಖಾತೆಗಳ ವಿವರಗಳನ್ನಷ್ಟೇ ಮಹಾಲೇಖಪಾಲರ ಲೆಕ್ಕದ ಪುಸ್ತಕ ಗಳಲ್ಲಿ ನಿರ್ವಹಣೆ ಮಾಡಲಾಗಿತ್ತು ಎಂದೂ ವರದಿ ಹೇಳಿದೆ.

2022–23ನೇ ಹಣಕಾಸು ವರ್ಷದಲ್ಲಿ ಅಧಿಕಾರಿಗಳ 18 ವೈಯಕ್ತಿಕ ಠೇವಣಿ (ಪಿ.ಡಿ) ಖಾತೆಗಳಲ್ಲಿ ₹ 562.18 ಕೋಟಿಯನ್ನು ಠೇವಣಿ ಇರಿಸಲಾಗಿತ್ತು. ₹5,963.79 ಕೋಟಿ ಋಣಾತ್ಮಕ ಶಿಲ್ಕಿನ 12 ಪಿ.ಡಿ ಖಾತೆಗಳಿದ್ದವು. 21 ಪಿ.ಡಿ ಖಾತೆಗಳು
2011–12ರಿಂದಲೇ ನಿಷ್ಕ್ರಿಯವಾಗಿದ್ದು, ಅವುಗಳನ್ನು ಮುಚ್ಚಲು ಪದೇ ಪದೇ ಆದೇಶ ನೀಡಲಾಗಿತ್ತು. ಆದರೂ, ಮುಕ್ತಾಯಗೊಳಿಸಿರಲಿಲ್ಲ ಎಂಬುದೂ ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.