ADVERTISEMENT

ಸಾಯಿಬಾಬಾ ಅವರದ್ದು ಸರ್ಕಾರಿ ಕೊಲೆ: ನಗರಗೆರೆ ರಮೇಶ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 4:38 IST
Last Updated 21 ಅಕ್ಟೋಬರ್ 2024, 4:38 IST
<div class="paragraphs"><p>ಪ್ರೊ.ಜಿ.ಎನ್‌.ಸಾಯಿಬಾಬಾ</p></div>

ಪ್ರೊ.ಜಿ.ಎನ್‌.ಸಾಯಿಬಾಬಾ

   

ಪಿಟಿಐ ಚಿತ್ರ

ಬೆಂಗಳೂರು: ‘ಮಾನವ ಹಕ್ಕುಗಳ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿದ್ದ ದೌರ್ಜನ್ಯದ ವಿರುದ್ಧ ಪ್ರೊ.ಜಿ.ಎನ್‌.ಸಾಯಿಬಾಬಾ ಹೋರಾಡಿದ್ದರು. ಆ ಹೋರಾಟಕ್ಕೆ ಅವರು ಜೀವವನ್ನೇ ತೆರಬೇಕಾಯಿತು’ ಎಂದು ಕರ್ನಾಟಕ ಜನಶಕ್ತಿ ಗೌರವಾಧ್ಯಕ್ಷ ನಗರಗೆರೆ ರಮೇಶ್‌ ಹೇಳಿದರು.

ADVERTISEMENT

ಕರ್ನಾಟಕ ಶ್ರಮಿಕ ಶಕ್ತಿ, ಪಿಡಿಎಫ್‌, ಪಿಯುಸಿಎಲ್‌ ಆಯೋಜಿಸಿದ್ದ ‘ಪ್ರೊ.ಜಿ.ಎನ್‌.ಸಾಯಿಬಾಬಾ ಶ್ರದ್ಧಾಂಜಲಿ ಸಭೆ’ಯಲ್ಲಿ ಅವರು ಮಾತನಾಡಿದರು. ‘ಅಂಗವಿಕಲರಾಗಿದ್ದ ಅವರನ್ನು ಏಳು ವರ್ಷ ಅಂಧಾಸೆಲ್‌ನಲ್ಲಿ ಹಾಕುವ ಮೂಲಕ ಅವರ ಜೀವವನ್ನು ತೆಗೆಯಲಾಯಿತು. ಸ್ಟ್ಯಾನ್‌ ಸ್ವಾಮಿ ಅವರನ್ನು ಈ ಸರ್ಕಾರ ಕೊಂದಂತೆಯೇ ಸಾಯಿಬಾಬಾ ಅವರನ್ನು ಕೊಲ್ಲಲಾಯಿತು’ ಎಂದರು.

‘ಉಗ್ರ ಸಂಘಟನೆಯ ಸಕ್ರಿಯ ಸದಸ್ಯ ಮತ್ತು ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿ, ಉಗ್ರರ ಸಂಘಟನೆಗೆ ಸಹಾಯ ಮಾಡಿದ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ಶಿಕ್ಷೆ ನೀಡಲಾಗಿತ್ತು. ಅವರ ವಿರುದ್ಧ ಕೆಲ ಪುಸ್ತಕಗಳು, ಬಸ್‌ ಮತ್ತು ರೈಲು ಟಿಕೆಟ್‌, ಸಿಮ್‌ ಕಾರ್ಡ್‌ ಮತ್ತು ಮೆಮರಿ ಕಾರ್ಡ್‌ಗಳನ್ನು ಸಾಕ್ಷ್ಯಗಳನ್ನಾಗಿ ಬಳಸಲಾಯಿತು. ಈ ಸಾಕ್ಷ್ಯಗಳೆಲ್ಲಾ ಸುಳ್ಳು ಎಂದು ಸಾಬೀತಾಗುವಷ್ಟರಲ್ಲಿ ಅವರ ಜೀವ ಹೈರಾಣಾಗಿತ್ತು’ ಎಂದು ವಕೀಲ ಎಸ್‌.ಬಾಲನ್‌ ಹೇಳಿದರು.

‘ಕೇಂದ್ರ ಸರ್ಕಾರವು ತನ್ನ ವಿರುದ್ಧ ಹೋರಾಡುವವರನ್ನು ವ್ಯವಸ್ಥಿತವಾಗಿ ಸಿಲುಕಿಸುವ ಪ್ರಕರಣಕ್ಕೆ ಇದು ಸ್ಪಷ್ಟ ನಿದರ್ಶನ. ನಮ್ಮ ನ್ಯಾಯಾಂಗ ವ್ಯವಸ್ಥೆ ವಿಫಲವಾದ ಕಾರಣದಿಂದಲೇ ಸಾಯಿಬಾಬಾ ಅವರನ್ನು ನಾವು ಕಳೆದುಕೊಳ್ಳಬೇಕಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.