ADVERTISEMENT

ನೆಲದಡಿ ‘ಅನಿಲ’; ಜನರ ಮನದಲ್ಲಿ ತಳಮಳ

‘ಸ್ವಚ್ಛ, ಪರಿಸರ ಸ್ನೇಹಿ ನಗರ’ ನಿರ್ಮಾಣಕ್ಕೆ ಪಿಎನ್‌ಜಿ ಸಹಕಾರಿ * ಸ್ಥಳೀಯ ಆಡಳಿತ ಸಂಸ್ಥೆಗಳ ನಡುವೆ ಸಮನ್ವಯ ಕೊರತೆ

ಸಂತೋಷ ಜಿಗಳಿಕೊಪ್ಪ
Published 16 ಜೂನ್ 2019, 20:28 IST
Last Updated 16 ಜೂನ್ 2019, 20:28 IST
ನಾಗನಾಥಪುರದ 'ಶಿವಸಾಯಿ ಕೇಟರಿಂಗ್‌'ನಲ್ಲಿ ಕೊಳವೆ ಅನಿಲ ಬಳಸಿ ಅಡುಗೆ ಮಾಡುವಲ್ಲಿ ನಿರತರಾದ ರಾಜು
ನಾಗನಾಥಪುರದ 'ಶಿವಸಾಯಿ ಕೇಟರಿಂಗ್‌'ನಲ್ಲಿ ಕೊಳವೆ ಅನಿಲ ಬಳಸಿ ಅಡುಗೆ ಮಾಡುವಲ್ಲಿ ನಿರತರಾದ ರಾಜು   

ಬೆಂಗಳೂರು:‌‌ ಬುಕಿಂಗ್ ಮಾಡಿ ಹಲವು ದಿನ ಕಳೆದರೂ ಅಡುಗೆ ಅನಿಲ ಸಿಲಿಂಡರ್‌ ಮನೆಗೆ ಬಾರದ ಕಾರಣಕ್ಕೆ ಬೇಸತ್ತಿದ್ದ ಜನರಿಗೆ, ‘ಮನೆ ಮನೆಗೆ ಅಡುಗೆ ಅನಿಲ’ ಎಂಬ ಘೋಷಣೆ ಖುಷಿ ತಂದಿತ್ತು. ನಗರದಲ್ಲಿ ಮನೆಗೆ ಕೊಳವೆಗಳ ಮೂಲಕ ನೈಸರ್ಗಿಕ ಅಡುಗೆ ಅನಿಲ (ಪಿಎನ್‌ಜಿ) ಪೂರೈಸುವ ಪ್ರಯತ್ನ ಆರಂಭವಾದ ಬೆನ್ನಲ್ಲೇ ಅವಘಡಗಳು ಪದೇ ಪದೇ ಸಂಭವಿಸುತ್ತಿರುವುದರಿಂದ ಜನರ ಮನದಲ್ಲಿ ತಳಮಳ ಶುರುವಾಗಿದೆ.

‘ಸ್ವಚ್ಛ ಹಾಗೂ ಪರಿಸರ ಸ್ನೇಹಿ ನಗರ’ ಎಂಬ ಧ್ಯೇಯವಿಟ್ಟುಕೊಂಡು ಹಲವು ಪ್ರದೇಶಗಳಿಗೆ ನೈಸರ್ಗಿಕ ಅಡುಗೆ ಅನಿಲ ಪೂರೈಕೆ ಮಾಡುವ ಮಹತ್ತರ ಯೋಜನೆ ಅನುಷ್ಠಾನಗೊಳಿಸಿರುವ ಭಾರತೀಯ ಅನಿಲ ಪ್ರಾಧಿಕಾರ (ಗೇಲ್), ಈಗಾಗಲೇ ಅನೇಕ ಕಡೆ ನೆಲದಡಿಯಲ್ಲಿ ಕೊಳವೆ ಮಾರ್ಗ ಅಳವಡಿಸಿದ್ದಲ್ಲದೇ ಸಾವಿರಾರು ಮನೆಗಳಿಗೂ ಅನಿಲ ಪೂರೈಸುತ್ತಿದೆ. ಇವುಗಳ ಕೊಳವೆಗಳು ಹಾನಿಗೊಳಗಾಗಿ ಅವುಗಳಿಂದ ಅನಿಲ ಸೋರಿಕೆಯಾಗುತ್ತಿವೆ.

ಗೇಲ್ ಸಂಸ್ಥೆಯ ನುರಿತ ಸಿಬ್ಬಂದಿಯೇ ಕೊಳವೆ ಮಾರ್ಗಗಳನ್ನು ಅಳವಡಿಸಿದ್ದಾರೆ. ಜಲಮಂಡಳಿ ಕೊಳವೆ ಅಳವಡಿಸಲು, ಬಿಬಿಎಂಪಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ, ಮೆಟ್ರೊ ಕಾಮಗಾರಿಗೆ, ಬೆಸ್ಕಾಂ ಕೇಬಲ್‌ ಅಳವಡಿಕೆಗೆ... ಹೀಗೆ ಹತ್ತು ಹಲವು ಕಾರಣಗಳಿಗೆ ನೆಲವನ್ನು ಅಗೆಯಲಾಗುತ್ತಿದೆ. ಅನಿಲದ ಕೊಳವೆ ಹಾದು ಹೋಗುವ ಕಡೆ ಗೇಲ್‌ ಸಂಸ್ಥೆಯ ಗಮನಕ್ಕೆ ತಾರದೆಯೇ ತಮ್ಮಿಷ್ಟದಂತೆ ನೆಲ ಅಗೆಯುತ್ತಿರುವುದು ಅವಘಡಗಳಿಗೆ ಕಾರಣವಾಗುತ್ತಿದೆ. ಇಂತಹ ಅನೇಕ ಪ್ರಕರಣಗಳು ನಡೆದ ಬಳಿಕವಂತೂ ಯಾವ ರಸ್ತೆಯಲ್ಲಿ ಯಾವಾಗ ಹಾಗೂ ಯಾವ ಮನೆಯಲ್ಲಿ ಸ್ಫೋಟ ಸಂಭವಿಸುತ್ತದೋ ಎಂಬ ಆತಂಕ ಜನರನ್ನು ಕಾಡುತ್ತಿದೆ.

ADVERTISEMENT

ಇತ್ತೀಚಿನ ಕೆಲ ಬೆಳವಣಿಗೆಗಳಿಂದಾಗಿ ಜನ, ‘ನಮಗೆ ಈ ಅನಿಲದ ಸಹವಾಸವೇ ಬೇಡ’ ಎಂದು ಹೇಳುತ್ತಿದ್ದಾರೆ. ಮನೆ ಸಮೀಪದಲ್ಲಿ ಗೇಲ್ ಕೊಳವೆ ಮಾರ್ಗ ಹಾದು ಹೋಗಿದ್ದವರಂತೂ ನೆಮ್ಮದಿಯಿಂದ ನಿದ್ದೆ ಮಾಡದ ಸ್ಥಿತಿ ಎದುರಾಗಿದೆ. ‘ಏಕಿಷ್ಟು ಆತಂಕ’ ಎಂದು ಪ್ರಶ್ನಿಸಿದರೆ, ಜನ ಹತ್ತು ಹಲವು ಕಾರಣಗಳನ್ನು ಬಿಚ್ಚಿಡುತ್ತಾರೆ.

‘ಸುಗಮ ಸಂಚಾರಕ್ಕಾಗಿ ನಮಗಿರು ವುದು ಒಂದೇ ರಸ್ತೆ. ಅದರ ಅಡಿಯಲ್ಲಿ ಗೇಲ್‌ ಕೊಳವೆ ಮಾರ್ಗ, ಕಾವೇರಿ ನೀರು ಹಾಗೂ ಒಳಚರಂಡಿ ಕೊಳವೆಗಳನ್ನು ಅಳವಡಿಸಲಾಗಿದೆ. ಈಗ ಬೆಸ್ಕಾಂ ಸಹ ವಿದ್ಯುತ್ ಕೇಬಲ್‌ಗಳನ್ನು ನೆಲ ದಡಿ ಅಳವಡಿಸುತ್ತಿದೆ. ಮೂರು ಇಲಾಖೆ ಗಳೂ ಒಂದಕ್ಕೊಂದು ಸಂಬಂಧವಿಲ್ಲವೇನೋ ಎಂಬಂತೆ ಕೆಲಸ ಮಾಡುತ್ತಿವೆ. ಅವೈಜ್ಞಾನಿಕವಾಗಿ ಪೈಪ್ ಅಳವಡಿಸುತ್ತಿರುವುದು ಅವಘಡಗಳಿಗೆ ದಾರಿ ಮಾಡಿಕೊಡುತ್ತಿವೆ’ ಎಂದು ನಾಗನಾಥ ಪುರದ ನಿವಾಸಿ ಷಣ್ಮುಗಪ್ಪ ಹೇಳಿದರು.

‘ಅಡುಗೆ ಮನೆಯೊಳಗೇ ಅನಿಲ ಬರುತ್ತದೆಂಬ ಖುಷಿ ಇದೆ. ಆದರೆ, ಒಬ್ಬರ ನಂತರ ಒಬ್ಬರು ಬಂದು ರಸ್ತೆ ಅಗೆದು ಪೈಪ್‌ಗಳ ಮೇಲೆ ಪೈಪ್ ಹಾಕಿ ಹೋಗುತ್ತಿದ್ದಾರೆ. ಯಾವಾಗ ಏನಾಗುತ್ತದೆ? ಎಂಬ ಭಯ ಮನೆಯವರನ್ನೆಲ್ಲ ಕಾಡುತ್ತಿದೆ. ಅಡುಗೆ ಅನಿಲ ಕೊಳವೆ ಹಾದುಹೋಗಿದೆ ಎಂಬ ಎಚ್ಚರಿಕೆಯ ಫಲಕ ಹಾಕಿದ ಸ್ಥಳದಲ್ಲೇ ಕೆಲವರು ರಾಜಾರೋಷವಾಗಿ ರಸ್ತೆ ಅಗೆದು ಕೊಳವೆ ಅಳವಡಿಸುತ್ತಿದ್ದಾರೆ. ಇವರ ಈ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದರೆ ಯಾರು ಹೊಣೆ’ ಎಂದು ಪ್ರಶ್ನಿಸುತ್ತಾರೆ ಸಿಂಗಸಂದ್ರದ ಲಕ್ಷ್ಮಮ್ಮ.

‘ಬುಕಿಂಗ್ ಮಾಡಿ ಅಡುಗೆ ಅನಿಲ ಸಿಲಿಂಡರ್‌ಗಾಗಿ ಕಾಯುವ ಬದಲು ನೇರವಾಗಿ ಮನೆಯೊಳಗೇ ಕೊಳವೆ ಮೂಲಕ ಅನಿಲ ತರಿಸಿಕೊಳ್ಳವುದು ಒಳ್ಳೆಯದೇ. ಆದರೆ, ಸ್ವಲ್ಪ ಯಡವಟ್ಟಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಕೊಳವೆ ಮಾರ್ಗ ಹಾದುಹೋಗಿರುವ ಸ್ಥಳಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವ ಬಗ್ಗೆ ಗೇಲ್‌ ಸಮರ್ಪಕ ವ್ಯವಸ್ಥೆ ರೂಪಿಸಬೇಕು. ಅವಘಡ ತಡೆಯಲು ಮುಂಜಾಗ್ರತಾ ಕ್ರಮ ಅನುಸರಿಸಬೇಕು’ ಎನ್ನುತ್ತಾರೆ ಸಿಂಗಸಂದ್ರದ ವ್ಯಾಪಾರಿ ರಮೇಶ್‌.

ಹೊಸೂರು ರಸ್ತೆಯಲ್ಲಿರುವ ಕೊಳವೆ ಮಾರ್ಗದ ‘ಎಚ್ಚರಿಕೆ’ ಫಲಕ

ಸ್ಫೋಟದ ಭೀಕರತೆ ಇನ್ನೂ ಮಾಸಿಲ್ಲ: ಅದು ಫೆಬ್ರುವರಿ 26. ಪರಪ್ಪನ ಅಗ್ರಹಾರ ಬಳಿಯ ನಾಗನಾಥ ಪುರದ ಮುನೇಶ್ವರ ಬ್ಲಾಕ್‌ನ ಮಹಿಳೆ ಯರು ಮನೆಗೆಲಸದಲ್ಲಿ ನಿರತರಾಗಿ ದ್ದರು. ಮಕ್ಕಳು ರಸ್ತೆಯಲ್ಲಿ ಆಟ ವಾಡುತ್ತಿದ್ದರು. ಕ್ಷಣಮಾತ್ರದಲ್ಲಿ ಸಂಭವಿ ಸಿದ್ದ ಆ ಸ್ಫೋಟ, ಇಡೀ ಪ್ರದೇಶ ಹೊಗೆಯಾಡುವಂತೆ ಮಾಡಿತ್ತು. ಮನೆಯೊಂದು ಕುಸಿದು ಬಿದ್ದಿದ್ದು, ಹಲವು ಮನೆಗಳ ಗೋಡೆ, ಬಾಗಿಲು ಹಾಗೂ ಕಿಟಕಿಗಳು ಮುರಿದಿದ್ದವು. ಮೈಯೆಲ್ಲ ಗಾಯವಾಗಿದ್ದ ಇಬ್ಬರು ಮಕ್ಕಳುರಸ್ತೆಯಲ್ಲೇ ನರಳುತ್ತಾ ‘ಅಮ್ಮಾ ಅಮ್ಮಾ’ ಎಂದು ಚೀರಾಡುತ್ತಿದ್ದರು. ಇಂದಿಗೂ ಆ ಭೀಕರ ದೃಶ್ಯ ನೆನಪಿಸಿ ಕೊಂಡಾಗ ಇಲ್ಲಿನ ನಿವಾಸಿಗಳು ಭಯಭೀತರಾಗುತ್ತಾರೆ.

‘ಮನೆಯ ರಸ್ತೆಯ ಅಡಿಯಲ್ಲಿ ಅಡುಗೆ ಅನಿಲದ ಪೈಪ್ ಹಾಕಲಾಗಿತ್ತು. ಬೆಸ್ಕಾಂನವರು ಅದಕ್ಕೆ ಹೊಂದಿಕೊಂಡೇ ವಿದ್ಯುತ್ ಕೇಬಲ್‌ ಅಳವಡಿಸಿದ್ದರು. ಅದರಲ್ಲಿ ಪ್ರಯೋಗಾರ್ಥವಾಗಿ ವಿದ್ಯುತ್ ಹರಿಸಿದ್ದಾಗ ಅನಿಲದ ಕೊಳವೆ ಹಾಗೂ ವಿದ್ಯುತ್‌ ಕೇಬಲ್‌ ಪರಸ್ಪರ ಸಂಪರ್ಕಕ್ಕೆ ಬಂದಿತ್ತು. ಗೇಲ್ ಅಳವಡಿಸಿದ್ದ ಪೈಪ್‌ಗೆ ಧಕ್ಕೆ ಆಗಿ ಅನಿಲ ಸೋರಿಕೆಯಾಗಿತ್ತು’ ಎಂದು ಸ್ಫೋಟದಿಂದ ಮನೆ ಕಳೆದು ಕೊಂಡ ಶ್ರೀನಿವಾಸಲು ವಿವರಿಸಿದರು.

‘ಒಳಚರಂಡಿಯಲ್ಲಿ ಸಂಗ್ರಹವಾದ ಅನಿಲ, ಶೌಚಾಲಯದ ಮೂಲಕ ಮನೆಯೊಳಗೆಲ್ಲ ಹರಡಿ ಸ್ಫೋಟ ಸಂಭವಿಸಿತ್ತು. ಮನೆಯೇ ನೆಲಸಮ ವಾಯಿತು. ಅಕ್ಕ–ಪಕ್ಕದ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕೇಬಲ್‌ಗಳನ್ನು ಸ್ಥಳದಲ್ಲೇ ಎಸೆದು ಓಡಿ ಹೋದ ಬೆಸ್ಕಾಂ ಸಿಬ್ಬಂದಿ, ಇದುವರೆಗೂ ವಾಪಸ್ ಬಂದಿಲ್ಲ. ತನ್ನ ತಪ್ಪಿನ ಅರಿವಾಗಿ ಬೆಸ್ಕಾಂ ಪರಿಹಾರ ನೀಡಿದೆ’ ಎಂದು ತಿಳಿಸಿದರು.

ಆಗತಾನೇ ಬಾಡಿಗೆ ಮನೆಗೆ ಬಂದಿದ್ದ ಕಲಬುರ್ಗಿಯ ಬಾಗಪ್ಪ, ‘ಸ್ಫೋಟದ ವೇಳೆ ಮಗ ರೋಹನ್ (12) ಹಾಗೂ ಮಗಳು ಗಗನಾ (11) ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆದು ನಾಲ್ಕು ತಿಂಗಳಾದರೂ ಅವರಿಬ್ಬರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯಲು ಮಾಡಿದ ಖರ್ಚನ್ನು ಮಾತ್ರ ಬೆಸ್ಕಾಂ ಭರಿಸಿದೆ. ಖಾಸಗಿ ಆಸ್ಪತ್ರೆಯ ಖರ್ಚನ್ನೂ ನಾವೇ ಭರಿಸಿದ್ದೇವೆ. ಮಕ್ಕಳ ಶಿಕ್ಷಣಕ್ಕಾದರೂ ಬೆಸ್ಕಾಂ ಸಹಾಯ ಮಾಡಬೇಕು’ ಎಂದು ಕೋರಿದರು.

ನಾಗನಾಥಪುರದ ಮುನೇಶ್ವರ ಬ್ಲಾಕ್‌ನಲ್ಲಿ ಸ್ಫೋಟ ಸಂಭವಿಸುತ್ತಿದ್ದಂತೆ ಪರಾರಿಯಾಗಿದ್ದ ಬೆಸ್ಕಾಂ ಸಿಬ್ಬಂದಿ, ಸ್ಥಳದಲ್ಲೇ ಕೇಬಲ್‌ಗಳನ್ನು ಬಿಟ್ಟು ಹೋಗಿದ್ದಾರೆ.

ಜವಾಬ್ದಾರಿಯುತ ತಂಡ ಬೇಕು: ಸಿಂಗಸಂದ್ರ, ಪರಪ್ಪನ ಅಗ್ರಹಾರ, ಬೆಳ್ಳಂದೂರು, ಮಾರತ್ತಹಳ್ಳಿ, ಡಾಲರ್ಸ್‌ ಕಾಲೊನಿ, ಮಂಗಮ್ಮನಪಾಳ್ಯ ಹಾಗೂ ಸುತ್ತಮುತ್ತ ಬಹುತೇಕ ರಸ್ತೆಗಳಲ್ಲಿ ಕೊಳವೆ ಮಾರ್ಗ ಅಳವಡಿಸಲಾಗಿದೆ. ಕೆಲವು ಮನೆಗಳಿಗೆ ಸಂಪರ್ಕ ನೀಡಲಾಗಿದ್ದು, ಅನಿಲ ಪೂರೈಕೆ ಸದ್ಯಕ್ಕೆ ಆರಂಭವಾಗಿಲ್ಲ. ಪೈಪ್‌ ಅಳವಡಿಕೆ ನಂತರವೂ ಹಲವರು ಸಂಪರ್ಕ ಬೇಡವೆಂದು ಹೇಳುತ್ತಿದ್ದಾರೆ.

‘ಸಂಪರ್ಕ ಏಕೆ ಪಡೆದಿಲ್ಲ’ ಎಂದು ಡಾಕ್ಟರ್ಸ್‌ ಲೇಔಟ್‌ನ ಮಹಿಳೆಯೊಬ್ಬರನ್ನು ಪ್ರಶ್ನಿಸಿದಾಗ, ‘ಅನಿಲ ಅಳವಡಿಸಿದರೆ ಸಾಲದು, ಮುಂಜಾಗ್ರತಾ ಕ್ರಮ ಹಾಗೂ ಗ್ರಾಹಕರ ತುರ್ತು ಕರೆಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ತಂಡವೂ ಬೇಕು. ಗೇಲ್‌ನವರು ಪ್ರತಿ ಮನೆಗೂ ಬಂದು ಮೇಲಿಂದ ಮೇಲೆ ಪರಿಶೀಲನೆ ನಡೆಸುತ್ತಿರಬೇಕು. ಇಂಥ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವವರೆಗೂ ಸಂಪರ್ಕ ಪಡೆಯುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದರು.

‘ಯಾರ‍್ಯಾರೋ ಯಾವಾಗಲೋ ಬಂದು ಮನ ಬಂದಂತೆ ರಸ್ತೆ ಅಗೆಯುತ್ತಿದ್ದಾರೆ. ಅನಿಲದ ಕೊಳೆವೆಗೆ ಧಕ್ಕೆ ಉಂಟು ಮಾಡಿ ಸೋರಿಕೆಯಾಗಲು ಕಾರಣವಾಗುತ್ತಿದ್ದಾರೆ. ಸಂಪರ್ಕ ಪಡೆದ ನಂತರ ಇಂಥ ಘಟನೆಗಳು ನಡೆದು ನಮ್ಮ ಮನೆಯಲ್ಲಿ ಅನಿಲ ತುಂಬಿಕೊಂಡು ಸ್ಫೋಟಗೊಂಡರೆ ನಮ್ಮ ಗತಿಯೇನು‘ ಎಂದು ಅವರು ಮರುಪ್ರಶ್ನೆ ಹಾಕಿದರು.

‘ಗೇಲ್‌ ಕಂಪನಿಯವರು ನಮ್ಮ ಪ್ರದೇಶದಲ್ಲಿ ಸಮಿತಿ ರಚಿಸಬೇಕು. ಆಗಾಗ ಸಭೆ ನಡೆಸಿ ಚರ್ಚಿಸುತ್ತಿರಬೇಕು. ನೆಲ ಅಗೆಯುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಸಂಪರ್ಕದ ವೇಳೆ ಗುಣಮಟ್ಟದ ವಸ್ತುಗಳನ್ನೇ ಬಳಸಬೇಕು. ಇಷ್ಟೆಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಸಂಪರ್ಕ ಪಡೆಯಲು ನಮ್ಮ ಅಭ್ಯಂತರವಿಲ್ಲ’ ಎಂದು ತಿಳಿಸಿದರು.

‘ಅರ್ಜಿ ಕೊಟ್ಟು ವರ್ಷವಾದ ನಂತರ ಮನೆಗೆ ಅನಿಲ ಸಂಪರ್ಕ ಕಲ್ಪಿಸಿದ್ದಾರೆ. ಭಯದಿಂದಾಗಿ ನಾವೇ ಅನಿಲ ಪೂರೈಕೆ ಮಾಡಿಸಿಕೊಂಡಿಲ್ಲ’ ಎನ್ನುತ್ತಾರೆ ಇಲ್ಲಿನ ಮತ್ತೊಬ್ಬ ಮಹಿಳೆ.

ಕೊಳವೆಯಿಂದ ‘ಅಡುಗೆ’ ಸುಗಮ
ಪರಪ್ಪರ ಅಗ್ರಹಾರ, ಸಿಂಗಸಂದ್ರ, ಎಚ್‌ಎಸ್ಆರ್‌ ಲೇಔಟ್, ಸರ್ಜಾಪುರ ರಸ್ತೆ ಹಾಗೂ ಸುತ್ತಮುತ್ತ ಕೇಟರಿಂಗ್‌ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲಿಗೆಲ್ಲ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಅಡುಗೆ ಕೆಲಸವೂ ಸುಗಮವಾಗಿದೆ’ ಎನ್ನುತ್ತಾರೆ ಈ ಕೇಟರಿಂಗ್‌ ಸಂಸ್ಥೆಗಳ ಕಾರ್ಮಿಕರು.

‘ಈ ಹಿಂದೆ ಎಲ್‌ಪಿಜಿ ತಂದು ಕೊಡುವವರೆಗೂ ಕಾಯಬೇಕಿತ್ತು. ಈಗ ದಿನದ 24 ಗಂಟೆಯೂ ಅನಿಲ ಸಿಗುತ್ತಿದೆ. ಅಡುಗೆ ಕೆಲಸವೂ ಬೇಗನೇ ಮುಗಿಯುತ್ತಿದೆ’ ಎಂದು ಶಿವಸಾಯಿ ಕೇಟರಿಂಗ್‌ನ ರಾಜು ಹೇಳಿದರು.

‘ದೊಡ್ಡ ಕಂಪನಿಗಳಿಗೆ ಊಟ ಪೂರೈಕೆ ಮಾಡುತ್ತೇವೆ. ಮೊದಲಿಗಿಂತ ತ್ವರಿತವಾಗಿ ಅಡುಗೆ ಸಿದ್ಧಪಡಿಸಿ ಕಳುಹಿಸುತ್ತಿದ್ದೇವೆ. ಖರ್ಚು ಕಡಿಮೆ. ನಿತ್ಯವೂ ಸಿಬ್ಬಂದಿ ಬಂದು ಪೈಪ್ ಪರೀಕ್ಷಿಸಿ ಹೋಗುತ್ತಾರೆ. ಅನಿಲ ಸೋರಿಕೆಯ ಭಯವೂ ಇಲ್ಲ’ ಎಂದು ಅವರು ತಿಳಿಸಿದರು.

‘ಸಿಲಿಂಡರ್‌ ಬದಲಾಯಿಸುವ ಕಿರಿಕಿರಿ ಇಲ್ಲ. ಎಲ್‌ಪಿಜಿಗೆ ಹೋಲಿಸಿದರೆ ಪಿಎನ್‌ಜಿ ಬಳಕೆಯಿಂದ ಶೇ 15ರಷ್ಟು ಹಣ ಉಳಿತಾಯ ಆಗಲಿದೆ’ ಎಂದು ತಿಳಿಸುತ್ತಾರೆ.

ಆರೋಪ– ಪ್ರತ್ಯಾರೋಪ
‘ಅನಿಲ ಕೊಳವೆಗಳು ಧಕ್ಕೆಯಾಗಲು ಯಾರು ಹೊಣೆ’ ಎಂದು ಪ್ರಶ್ನಿಸಿದರೆ ಗೇಲ್, ಬೆಸ್ಕಾಂ ಹಾಗೂ ಜಲಮಂಡಳಿ ಸಿಬ್ಬಂದಿ ಪರಸ್ಪರ ಬೊಟ್ಟು ಮಾಡುತ್ತಾರೆ.

‘ನಿವಾಸಿಗಳಿಗೆ ಏನಾದರೂ ಆಗಲಿ, ನಾವು ಮಾತ್ರ ಪೈಪ್ ಅಳವಡಿಸಿ ಹೋಗುತ್ತೇವೆ’ ಎಂಬಂತೆ ಬೆಸ್ಕಾಂ ಹಾಗೂ ಜಲಮಂಡಳಿ ಸಿಬ್ಬಂದಿ ವರ್ತಿಸುತ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ‘ನೆಲ ಅಗೆಯಲು ಬರುವ ಸಿಬ್ಬಂದಿ ಜೊತೆ ನಿವಾಸಿಗಳು ಪ್ರತಿ ಬಾರಿಯೂ ಜಗಳ ಮಾಡುತ್ತಿದ್ದಾರೆ. ಅಷ್ಟಾದರೂ ಜಲಮಂಡಳಿ, ಬೆಸ್ಕಾಂನವರು ನೆಲ ಅಗೆಯುವುದನ್ನು ನಿಲ್ಲಿಸುವುದಿಲ್ಲ’ ಎಂದು ಸ್ಥಳೀಯರು ಬೇಸರ ತೋಡಿಕೊಂಡರು.

ಆ ಬಗ್ಗೆ ಜಲಮಂಡಳಿ ಸಿಬ್ಬಂದಿಯನ್ನು ವಿಚಾರಿಸಿದರೆ, ‘ನಾವು ಕೂಡಾ ಜನರ ಕೆಲಸ ಮಾಡುವ ಸರ್ಕಾರಿ ನೌಕರರು. ಎಂಜಿನಿಯರ್ ಹೇಳಿದಂತೆ ಪೈಪ್ ಹಾಕುವುದಷ್ಟೇ ನಮ್ಮ ಕೆಲಸ’ ಎಂದರು.

ಬೇಕಾಬಿಟ್ಟಿ ಅಗೆದರೆ ಕಷ್ಟ; ಗೇಲ್
‘ನೆಲದಡಿ ಸುಮಾರು 3 ಅಡಿಯಷ್ಟು ಅಗೆದು ಉಕ್ಕಿನ ಹಾಗೂ ಎಂಡಿಪಿ (ಮೀಡಿಯಂ ಡೆನ್ಸಿಟಿ ಪಾಲಿಇಥಲೀನ್) ಕೊಳವೆ ಅಳವಡಿಸಲಾಗಿದೆ. ಯಾರಾದರೂ ಬೇಕಾಬಿಟ್ಟಿಯಾಗಿ ನೆಲ ಅಗೆದರೆ ಕೊಳವೆಗೆ ಧಕ್ಕೆ ಆಗುವ ಸಾಧ್ಯತೆ ಹೆಚ್ಚು’ ಎಂದು ಗೇಲ್‌ ಕಂಪನಿ ಪ್ರತಿನಿಧಿಯೊಬ್ಬರು ತಿಳಿಸಿದರು.

‘ನೈಸರ್ಗಿಕ ಅನಿಲ ಅಪಾಯಕಾರಿ ಅಲ್ಲ. ಆದರೂ ಪ್ರತಿ ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಪ್ರತಿದಿನ ಅನಿಲ ಪೂರೈಕೆಯಾಗುವ ಕೊಳವೆ ಮೇಲೆ ನಿಗಾ ವಹಿಸಲಾಗುತ್ತದೆ. ಅನಾಹುತ ಸಂಭವಿಸಿದರೆ ವಾಲ್ವ್‌ಗಳನ್ನು ಮುಚ್ಚುವ ಮೂಲಕ ಅನಿಲ ಪೂರೈಕೆ ನಿಲ್ಲಿಸುತ್ತೇವೆ’ ಎಂದು ವಿರಿಸಿದರು.

‘ಎಂಜಿನಿಯರ್ ಸ್ಥಳದಲ್ಲಿರುವುದು ಕಡ್ಡಾಯ’
‘ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ಗೇಲ್ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಅದರಲ್ಲಿರುವ ಅಂಶಗಳನ್ನು ಪರಿಶೀಲಿಸಿ ಕೆಲ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ ಶಿವಪ್ರಸಾದ್ ಹೇಳಿದರು.

‘ಅನಿಲದ ಕೊಳವೆ ಮಾರ್ಗವಿರುವ ಜಾಗದಲ್ಲಿ ರಸ್ತೆ ಅಗೆಯುವಾಗ ಗೇಲ್ ಕಂಪನಿಯ ಎಂಜಿನಿಯರ್ ಹಾಗೂ ಜಲಮಂಡಳಿ ಎಂಜಿನಿಯರ್ ಸ್ಥಳದಲ್ಲೇ ಇರುವಂತೆ ಸೂಚಿಸಲಾಗಿದೆ. ಇದನ್ನು ಎಲ್ಲರೂ ಪಾಲಿಸುತ್ತಿದ್ದು, ಅವಘಡಗಳ ಸಂಖ್ಯೆಯೂ ಕಡಿಮೆ ಆಗುತ್ತಿದೆ’ ಎಂದು ತಿಳಿಸಿದರು.

‘ಅಗತ್ಯವಿದ್ದಾಗಲೆಲ್ಲ ಗೇಲ್ ಕಂಪನಿ, ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕಂಪನಿಯವರು ಕೆಲ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ನೀಡುವುದಾಗಿ ಹೇಳಿದ್ದಾರೆ. ಅವರು ಕೊಟ್ಟ ನಂತರವೇ ಪರಿಶೀಲನೆ ನಡೆಸಿ ಜಾರಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಇತ್ತೀಚಿನ ಅವಘಡಗಳು
ಜನವರಿ 5;
ಬೆಂಗಳೂರು ಎಚ್‌ಎಸ್ಆರ್‌ ಲೇಔಟ್‌ ಒಂದನೇ ಹಂತದ 11ನೇ ಮುಖ್ಯರಸ್ತೆಯ 22ನೇ ಅಡ್ಡರಸ್ತೆಯ ನೆಲದಡಿ ಅಳವಡಿಸಿರುವ ಗ್ಯಾಸ್‌ ಪೈಪ್‌ ಒಡೆದು ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು.

ಜನವರಿ 11: ಬೆಂಗಳೂರು ಬೆಳ್ಳಂದೂರು ಬಳಿಯ ಸರ್ಜಾಪುರ ರಸ್ತೆಯ ನೆಲದಡಿ ಅಳವಡಿಸಿರುವ ನೈಸರ್ಗಿಕ ಅನಿಲದ ಪೈಪ್‌ ಒಡೆದಿದ್ದರಿಂದ, ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು.

ಜನವರಿ 22; ಬೆಂಗಳೂರು ಸಿಂಗಸಂದ್ರ ಬಳಿಯ ಎಇಸಿಎಸ್ ಬಡಾವಣೆಯ ನೆಲದಡಿಯಲ್ಲಿ ಅಳವಡಿಸಿದ್ದ ನೈಸರ್ಗಿಕ ಅನಿಲದ ಪೈಪ್‌ ತುಂಡಾಗಿ ಬೆಂಕಿ ಹೊತ್ತಿಕೊಂಡಿತ್ತು. ಆ ಸಂಬಂಧ ಬೆಸ್ಕಾಂನ ಸಹಾಯಕ ಎಂಜಿನಿಯರ್ ಮೋಹನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಮಾರ್ಚ್‌ 24; ಬೆಂಗಳೂರು ಹರಳೂರು ರಸ್ತೆಯಲ್ಲಿರುವ ಎಸಿಎಸ್‌ ಬಡಾವಣೆಯಲ್ಲಿ ನೆಲದಡಿ ಅಳವಡಿಸಿರುವ ಕೊಳವೆಮಾರ್ಗದಿಂದ ನೈಸರ್ಗಿಕ ಅನಿಲ ಸೋರಿಕೆಯಾಗಿ ಕಸಕ್ಕೆ ಬೆಂಕಿ ಹೊತ್ತಿಕೊಂಡಿತ್ತು.

ಅಂಕಿ–ಅಂಶಗಳು
1.02 ಲಕ್ಷ – ಅನಿಲ ಸಂಪರ್ಕ ಕಲ್ಪಿಸಿರುವ ಮನೆಗಳ ಸಂಖ್ಯೆ
12,678 – ಅನಿಲ ಬಳಕೆ ಮಾಡುತ್ತಿರುವ ಮನೆಗಳು
1,155 ಕಿ.ಮೀ - ಕೊಳವೆ ಮಾರ್ಗ ಅಳವಡಿಕೆ
20‌ - ಸಿಎನ್‌ಜಿ ಕೇಂದ್ರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.