ಬೊಮ್ಮನಹಳ್ಳಿ: ಚರಂಡಿಯ ನೀರನ್ನು ಸಂಸ್ಕರಿಸಿ ಶುದ್ಧ ಕುಡಿಯುವ ನೀರು ನೀಡುವ ಇಸ್ರೇಲ್ ಕಂಪನಿಯ ‘ಗಾಲ್ ಮೊಬೈಲ್’ ನೀರು ಸಂಸ್ಕರಣೆ ಯಂತ್ರವು ನಗರಕ್ಕೆ ಬಂದಿದೆ.
ಬೊಮ್ಮನಹಳ್ಳಿಯ ಎಚ್ಎಸ್ಆರ್ ಲೇಔಟ್‌ನಲ್ಲಿ ಇದರ ಮೊದಲ ಪ್ರಾತ್ಯಕ್ಷಿಕೆ ನೀಡಲಾಯಿತು,
ಕೊಳವೆಯ ಮೂಲಕ ಚರಂಡಿ ನೀರನ್ನು ಹೀರಿ, ನಾಲ್ಕು ಹಂತಗಳಲ್ಲಿ ಸಂಸ್ಕರಿಸಿ ಶುದ್ಧ ಕುಡಿಯುವ ನೀರು ಕೊಡುತ್ತದೆ. ಕಿರಿದಾದ ಪ್ರದೇಶಗಳಿಗೂ ಕೊಂಡೊಯ್ಯಬಹುದಾದ ಚಿಕ್ಕ ವಾಹನ ದಲ್ಲಿ ಯಂತ್ರವನ್ನು ಅಳವಡಿಸಲಾಗಿದೆ. ನಾಲ್ಕು ಶೋಧಕ ಕೊಳಾಯಿಗಳು ತ್ಯಾಜ್ಯ ನೀರಿನ ಸಣ್ಣ ಮತ್ತು ದೊಡ್ಡ ಕಣಗಳನ್ನು ಶೋಧಿಸಿ, ನೀರಿನ ದುರ್ಗಂಧವನ್ನು ತೆಗೆದು, ಅಂತಿಮವಾಗಿ ಕುಡಿಯಲು ಯೋಗ್ಯವಾದ ನೀರನ್ನು ಪ್ರತ್ಯೇಕಿಸುತ್ತವೆ.
ಶಾಸಕ ಸತೀಶ್ ರೆಡ್ಡಿ ಮಾತನಾಡಿ, ‘ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದಾಗ, ಈ ಯಂತ್ರಗಳನ್ನು ಭಾರತಕ್ಕೆ ತರಲು ಆಸಕ್ತಿ ತೋರಿದ್ದರು. ಇದೀಗ ಗುಜರಾತಿನಲ್ಲಿ 15 ಯಂತ್ರಗಳು ಕೆಲಸ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಮೊದಲ ಬಾರಿಗೆ ಬೊಮ್ಮನಹಳ್ಳಿಗೆ ತರಲಾಗಿದೆ’ ಎಂದರು.
‘ನೆರೆ ಸಂದರ್ಭದಲ್ಲಿ ಹಾಗೂ ಫ್ಲೋರೈಡ್‌ಯುಕ್ತ ನೀರು ಇರುವ ಪ್ರದೇಶಗಳಿಗೆ ಇದು ಪ್ರಯೋಜನಕಾರಿ. ಅಪಾರ್ಟ್‌ಮೆಂಟ್‌ನ ಎಸ್‌ಟಿಪಿಗಳಿಗೆ, ಬಡಾವಣೆ, ಶಾಲಾ-ಕಾಲೇಜುಗಳಲ್ಲಿ ಮತ್ತು ಹಳ್ಳಿಗಳಲ್ಲಿಯೂ ಈ ಯಂತ್ರವನ್ನು ಅಳವಡಿಸಿಕೊಳ್ಳಬಹುದು. ಯಂತ್ರಕ್ಕೆ ₹1.25 ಲಕ್ಷ ಬೆಲೆ ಇದ್ದು, ಕಂಪನಿಯೇ ಇದರ ನಿರ್ವಹಣೆ ಮಾಡುತ್ತದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿ, ಈ ಯಂತ್ರವನ್ನು ‘ಮೇಕ್ ಇನ್ ಕರ್ನಾಟಕ’ ಯೋಜನೆಯ ಅಡಿ ಉತ್ಪಾದಿಸಲು ಕೋರಲಾಗುವುದು’ ಎಂದು ತಿಳಿಸಿದರು.
‘ಈಗಾಗಲೇ ಮಿಲಿಟರಿ, ಎನ್‌ಡಿಆರ್‌ಎಫ್‌ನಲ್ಲಿ ಬಳಸಲಾಗುತ್ತಿದ್ದು, ನಿರ್ವಹಣಾ ವೆಚ್ಚವೂ ಕಡಿಮೆ ಇದೆ. ದಿನಕ್ಕೆ 15 ಸಾವಿರದಿಂದ 20 ಸಾವಿರ ಲೀಟರ್ ನೀರನ್ನು ಸಂಸ್ಕರಿಸುತ್ತದೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದೆ’ ಎಂದು ತಾಂತ್ರಿಕ ಸಲಹೆಗಾರ ಡಾ.ಮೂರ್ತಿ ಹೇಳುತ್ತಾರೆ.
ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಕೃಷ್ಣಮೂರ್ತಿ, ಮಾಜಿ ಉಪ ಮೇಯರ್ ರಾಮಮೋಹನ್ ರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.