ಹೆಸರಘಟ್ಟ: ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರು, ವಿದ್ಯುತ್ ದೀಪಗಳ ಅಳವಡಿಕೆ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ, ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರು ಗ್ರಾಮ ಪಂಚಾಯಿತಿಗೆ 2022-23ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ’ ಪ್ರದಾನ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ಹಮ್ಮಿಕೊಂಡ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಜೇಶ್ ಎಚ್.ಆರ್, ಅಧ್ಯಕ್ಷ ಬಿ.ರಮೇಶ್ ಹಾಗೂ ಉಪಾಧ್ಯಕ್ಷೆ ಕೆಂಪಮ್ಮ ಈ ಪ್ರಶಸ್ತಿ ಸ್ವೀಕರಿಸಿದರು. ಈ ಪ್ರಶಸ್ತಿಯು ಗಾಂಧಿ ಚರಕ, ₹5 ಲಕ್ಷ ನಗದು ಒಳಗೊಂಡಿದೆ.
‘ಮೂರು ವರ್ಷಗಳ ಸತತ ಪರಿಶ್ರಮಕ್ಕೆ ಸಂದ ಪ್ರತಿಫಲವಿದು. ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 20 ಗ್ರಾಮಗಳು ಬರುತ್ತವೆ. 22 ಸದಸ್ಯರಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂಬ ಧ್ಯೇಯ ನಮ್ಮದಾಗಿದೆ. ಎಲ್ಲಾ ಸೇವೆಗಳು ಒಂದೇ ಸೂರಿನಡಿ ಸಿಗುವಂತೆ ಮಾಡಲು ಗ್ರಾಮ ಪಂಚಾಯಿತಿ ಆವರಣದಲ್ಲಿಯೇ ವ್ಯವಸ್ಥೆ ಮಾಡುತ್ತಿದ್ದೇವೆ. ಗ್ರಂಥಾಲಯ, ಅಂಚೆ ಕಚೇರಿ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಸ್ತ್ರೀಶಕ್ತಿ ಭವನ, ಸಾಮಾನ್ಯ ಸೇವೆಗಳ ಕಚೇರಿಗಳನ್ನು ತೆರೆಯುವ ಚಿಂತನೆಯನ್ನು ಹೊಂದಿದ್ದೇವೆ’ ಎಂದು ರಾಜೇಶ್ ಎಚ್.ಆರ್. ತಿಳಿಸಿದರು.
ಬಿ.ರಮೇಶ್, ‘ಪಂಚಾಯಿತಿಗೆ ಪ್ರಶಸ್ತಿ ಬಂದಿರುವುದು ಅತ್ಯಂತ ಖುಷಿಯ ವಿಚಾರ. ಎಲ್ಲಾ ಸದಸ್ಯರ ಸಹಕಾರದಿಂದ ಪ್ರಗತಿಪರ ಕೆಲಸ ಮಾಡಲು ಸಾಧ್ಯವಾಯಿತು. ಪ್ರಶಸ್ತಿಯು ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ಜನರ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.