ADVERTISEMENT

ವಿ.ವಿಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರ: ಸಿ.ಎಂ

ಬಾ–ಬಾಪು 150ನೇ ಜನ್ಮ ವರ್ಷಾಚರಣೆಯಲ್ಲಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 20:20 IST
Last Updated 2 ಅಕ್ಟೋಬರ್ 2019, 20:20 IST
   

ಬೆಂಗಳೂರು: ‌‘ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರ ತೆರೆಯಲು ಕೂಡಲೇ ಸೂಚನೆ ನೀಡುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಕರ್ನಾಟಕ ಗಾಂಧಿ ಸ್ವಾರಕ ನಿಧಿ ವತಿಯಿಂದ ಗಾಂಧಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಬಾ–ಬಾಪು 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮೈಲಾರ ಮಹಾದೇವ ಸಭಾಂಗಣ ಉದ್ಘಾಟಿಸಿ ಮಾತನಾಡಿದರು.

‘ಡಿಜಿಟಲ್ ಯುಗದಲ್ಲಿ ಯುವಪೀಳಿಗೆಯವರು ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ಗಳ ಮೇಲೆ ಅವಲಂಬಿ ತರಾಗಿ ಸ್ವಯಂ ವೈಭವೀಕರಣದ ಗೀಳಿಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಗಾಂಧೀಜಿ ಅವರು ಎಂದಿಗಿಂತ ಈಗ ಹೆಚ್ಚು ಪ್ರಸ್ತುತವಾಗಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಗಾಂಧೀಜಿ ಚಿಂತನೆ ಮತ್ತು ಸಿದ್ಧಾಂತಗಳನ್ನು ವಿದ್ಯಾರ್ಥಿಗಳಿಗೆ ತಲುಪಿ ಸಲು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಕೇಂದ್ರ ಇರಬೇಕಿತ್ತು. ಆದರೆ, ಅದೇಕೋ ಈ ವಿಷಯದಲ್ಲಿ ಹಿನ್ನಡೆಯಾಗಿದೆ. ಸರಿಪಡಿಸಲು ಕೂಡಲೇ ಸೂಚನೆ ನೀಡಲಾಗುವುದು’ ಎಂದರು.

‘ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ. ತಲಾ ₹3 ಕೋಟಿಯಂತೆ ₹75 ಕೋಟಿ ಬಿಡುಗಡೆ ಮಾಡಲಾಗಿದೆ. ಬಳ್ಳಾರಿ, ಹಾಸನ, ಮಡಿಕೇರಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಒಂದೂವರೆ ವರ್ಷಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಗಾಂಧಿ ಭವನ ನಿರ್ಮಾಣಗೊಳ್ಳಲಿವೆ’ ಎಂದು ಹೇಳಿದರು.

ಶಾಸಕ ಎಚ್.ಕೆ.ಪಾಟೀಲ, ‘ಗಾಂಧೀ ಜಿ ತತ್ವ ಸಿದ್ಧಾಂತಗಳನ್ನು ಯುವ ಜನರಿಗೆ ತಲುಪಿಸಲು ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಗಾಂಧಿ ಅಧ್ಯಯನ ಕೇಂದ್ರ ತೆರೆಯಲು ಸರ್ಕಾರ ಸೂಚಿಸಬೇಕು ಎಂದು ಮನವಿ ಮಾಡಿದರು.

‘ಸ್ವಚ್ಛನಗರ ಹಾಗೂ ಸ್ವಾಸ್ಥ್ಯ ಪರಿಸರಕ್ಕಾಗಿ ಸೈಕಲ್ ಜಾಗೃತಿ ಜಾಥಾ ಮತ್ತು ಸದ್ಭಾವನಾ ಪಾದಯಾತ್ರೆ’ ಆನಂದರಾವ್ ವೃತ್ತದಿಂದ ಗಾಂಧೀ ಭವನದವರೆಗೆ ನಡೆಯಿತು.

ಅಂತರರಾಷ್ಟ್ರೀಯ ಸಮ್ಮೇಳನ

‘ಗಾಂಧೀಜಿ ಮತ್ತು ಕಸ್ತೂರಬಾ ಹೆಸರಿನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಲು ಸರ್ಕಾರ ಸಿಡದ್ಧವಿದೆ’ ಎಂದು ಯಡಿಯೂರಪ್ಪ ಹೇಳಿದರು.

‘ಗಾಂಧೀಜಿ ಅವರ ವ್ಯಕ್ತಿತ್ವ ರೂಪಿಸುವಲ್ಲಿ ಕಸ್ತೂರಬಾ ಅವರ ಕೊಡುಗೆ ಅಪಾರ. ಅವರು ಸಾರಿದ ಮೌಲ್ಯಗಳು ಎಲ್ಲರನ್ನೂ ತಲುಪಬೇಕು. ಈ ಕುರಿತ ಸಮ್ಮೇಳನ ನಡೆಸಲು ಎಷ್ಟು ಹಣ ಖರ್ಚಾದರೂ ಚಿಂತೆಯಿಲ್ಲ. ಒಳ್ಳೆಯ ಕೆಲಸಕ್ಕೆ ಹಿಂದುಮುಂದು ನೋಡದೆ ಕೇಳಿದಷ್ಟು ಹಣ ಒದಗಿಸುತ್ತೇನೆ. ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಿಕೊಳ್ಳಿ’ ಎಂದು ಗಾಂಧೀ ಸ್ಮಾರಕ ನಿಧಿಯ ಪದಾಧಿಕಾರಿಗಳಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.