ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೆ ರಾತ್ರಿ ವಸತಿರಹಿತಗಾಗಿ ಒಟ್ಟು 10 ಆಶ್ರಯ ಕೇಂದ್ರಗಳಿದ್ದವು. ಗಾಂಧಿನಗರ ವಾರ್ಡ್‌ನ ತುಳಸಿತೋಟದ ಬಳಿಯ ಆರೋಗ್ಯ ವೈದ್ಯಾಧಿಕಾರಿಯವರ ಕಚೇರಿ ಮೇಲ್ಭಾಗದಲ್ಲಿ ಸ್ಥಾಪಿಸಿರುವ ಆಶ್ರಯ ಕೇಂದ್ರ ಈ ಪಟ್ಟಿಗೆ ಹೊಸತಾಗಿ ಸೇರ್ಪಡೆಯಾಗಿದೆ.
ತುಳಸಿ ತೋಟದ ನೂತನ ಆಶ್ರಯ ಕೇಂದ್ರವನ್ನು ಶಾಸಕ ದಿನೇಶ್ ಗುಂಡೂರಾವ್ ಹಾಗೂ ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಗುರುವಾರ ಉದ್ಘಾಟಿಸಿದರು.
ಈ ಕೇಂದ್ರದಲ್ಲಿ ಏಕಕಾಲಕ್ಕೆ 40 ಮಂದಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ನಗರದಲ್ಲಿರುವ ರಾತ್ರಿ ವಸತಿರಹಿತರು, ನಿರಾಶ್ರಿತರು ಈ ಆಶ್ರಯ ಕೇಂದ್ರದಲ್ಲಿ ಆಶ್ರಯ ಪಡೆಯಬಹುದು. ಅವರಿಗೆ ಪಾಲಿಕೆ ವತಿಯಿಂದ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರತಿ 15 ದಿನಕ್ಕೊಮ್ಮೆ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಯಾರಿಗಾದರೂ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.
ವಸತಿರಹಿತರ ಆಶ್ರಯ ಕೇಂದ್ರಗಳಿಗೆ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಅನುದಾನ ಒದಗಿಸಲಾಗುತ್ತದೆ.
ಗೂಡ್ ಶೆಡ್ ರಸ್ತೆಯ ಆಶ್ರಯ ಕೇಂದ್ರಕ್ಕೆ ಭೇಟಿ: ಗೂಡ್‌ಶೆಡ್ ರಸ್ತೆಯಲ್ಲಿರುವ ಆಶ್ರಯ ಕೇಂದ್ರಕ್ಕೆ ಗೌರವ್ ಗುಪ್ತ ಹಾಗೂ ದಿನೇಶ್ ಗುಂಡೂರಾವ್ ಭೇಟಿ ನೀಡಿ ಅಲ್ಲಿ ಆಶ್ರಯ ಪಡೆದಿರುವ ವಸತಿರಹಿತರ ಯೋಗಕ್ಷೇಮ ವಿಚಾರಿಸಿದರು. ಈ ಆಶ್ರಯ ಕೇಂದ್ರದಲ್ಲೂ 40 ಮಂದಿ ಉಳಿದುಕೊಳ್ಳುವಷ್ಟು ವ್ಯವಸ್ಥೆ ಇದೆ. ಪ್ರಸ್ತುತ 38 ಮಂದಿ ಆಶ್ರಯ ಪಡೆದಿದ್ದಾರೆ.
ವಿಶೇಷ ಆಯುಕ್ತ (ಕಲ್ಯಾಣ) ರವೀಂದ್ರ ಹಾಗೂ ಪಶ್ಚಿಮ ವಲಯ ಜಂಟಿ ಆಯುಕ್ತ ಶಿವಸ್ವಾಮಿ ಆಶ್ರಯ ಕೇಂದ್ರಗಳ ವ್ಯವಸ್ಥೆ ಬಗ್ಗೆ ವಿವರಿಸಿದರು.
ಬಿಬಿಎಂಪಿ ವ್ಯಾಪ್ತಿಯ ಆಶ್ರಯ ಕೇಂದ್ರಗಳು
ಗೂಡ್ ಶೆಡ್ ರಸ್ತೆ ಆಶ್ರಯ ಕೇಂದ್ರ
ಗೂಡ್ ಶೆಡ್ ರಸ್ತೆ (ತುಳಸಿ ತೋಟ) ಆಶ್ರಯ ಕೇಂದ್ರ
ರಾಜಾಜಿನಗರ ರಾಮ ಮಂದಿರದ ಬಳಿ
ಉಪ್ಪಾರಪೇಟೆ ಮುಂಭಾಗದ ಹೆಲ್ತ್ ಕಿಯಾಸ್ಕ್
ಗಾಂಧಿನಗರದ ಬಿಬಿಎಂಪಿ (ಹುಡುಗರ) ಕಾಲೇಜು ಬಳಿ
ಮರ್ಫಿ ಟೌನ್‌ನಲ್ಲಿ
ಪೀಣ್ಯ ದಾಸರಹಳ್ಳಿಯಲ್ಲಿ ತುಮಕೂರು ರಸ್ತೆ ಪಕ್ಕ
ಚೊಕ್ಕಸಂದ್ರ ಮುಖ್ಯ ರಸ್ತೆ ಬಳಿ
ಹೂಡಿ ಮುಖ್ಯ ರಸ್ತೆ ಬಳಿಯ ನಗರಸಭೆ ಕಟ್ಟಡದಲ್ಲಿ
ಜಂಬೂಸವಾರಿ ದಿಣ್ಣೆಯ ಅಂಬೇಡ್ಕರ್ ಭವನದಲ್ಲಿ
ಬಾಗಲೂರು ರಸ್ತೆ ಬಳಿ
ಒಡೆಯರ್ ಕಾಲದ ಶಾಲಾ ಕಟ್ಟಡ ಅಭಿವೃದ್ಧಿ
ನಗರದ ಗಾಂಧಿನಗರ ವಾರ್ಡ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ವಿಶೇಷ ಅಭಿವೃದ್ಧಿ ಕಾರ್ಯಕ್ರಮಗಳ ಅಡಿ ₹ 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.ಮೈಸೂರು ಒಡೆಯರ್ ಆಡಳಿತದ ಕಾಲದಲ್ಲಿ ಪ್ರಾರಂಭಿಸಲಾದ ಈ ಶಾಲೆಯ ಕಟ್ಟಡ ತೀರಾ ಹಳೆಯದು. ಈ ಪುರಾತನ ಕಟ್ಟಡವನ್ನು ಸಂರಕ್ಷಿಸಿ ಉನ್ನತೀಕರಿಸಲಾಗುತ್ತಿದೆ. ಈಗಾಗಲೇ ಶೇ 80 ರಷ್ಟು ಕಾಮಗಾರಿ ನಡೆದಿದೆ.
ದಿನೇಶ್ ಗುಂಡೂರಾವ್ ಹಾಗೂ ಗೌರವ್ ಗುಪ್ತ ಅವರು ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.
ಸ್ವಾತಂತ್ರ್ಯ ಉದ್ಯಾನ– ಅನುದಾನಕ್ಕೆ ಕೋರಿಕೆ
ಸುಮಾರು 21 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ನಗರದ ಸ್ವಾತಂತ್ರ್ಯ ಉದ್ಯಾನವನ್ನು ಗೌರವ್ ಗುಪ್ತ ಪರಿಶೀಲನೆ ನಡೆಸಿದರು.
ಇಲ್ಲಿ ವಾಯುವಿಹಾರ ಮಾರ್ಗ, ಕಾರಂಜಿ, ಸಭಾಂಗಣ, ಇಲ್ಲಿನ ಭೂದೃಶ್ಯ ಸುಂದರಗೊಳಿಸುವಿಕೆ, ಶೌಚಾಲಯ ಮತ್ತಿತರ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ದಿನೇಶ್ ಗುಂಡೂರಾವ್ ಅವರು ಮುಖ್ಯ ಆಯುಕ್ತರಲ್ಲಿ ಕೋರಿದರು.
ಸ್ವಾತಂತ್ರ್ಯ ಉದ್ಯಾನ ನವೀಕರಣದ ರೂಪರೇಷೆ ಸಿದ್ದಪಡಿಸುವಂತೆ ಪಾಲಿಕೆಯ ತೋಟಗಾರಿಕಾ ವಿಭಾಗದ ಅಧಿಕಾರಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.