ADVERTISEMENT

ಇನ್ನೆಲ್ಲೂ ಗಣೇಶ ಪ್ರತಿಷ್ಠಾಪನೆ ಮಾಡಲ್ಲ: ರಾಮೇಗೌಡ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 21:24 IST
Last Updated 30 ಆಗಸ್ಟ್ 2022, 21:24 IST
ಚಾಮರಾಜಪೇಟೆಯಲ್ಲಿರುವ ಈದ್ಗಾ ಆಟದ ಮೈದಾನ
ಚಾಮರಾಜಪೇಟೆಯಲ್ಲಿರುವ ಈದ್ಗಾ ಆಟದ ಮೈದಾನ   

ಬೆಂಗಳೂರು: ‘ಚಾಮರಾಜಪೇಟೆ ಆಟದ ಮೈದಾನದಲ್ಲೇ ವೇದಿಕೆ ವತಿಯಿಂದ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಬೇರೆಲ್ಲೂ ಮಾಡುವುದಿಲ್ಲ’ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಅಧ್ಯಕ್ಷ ರಾಮೇಗೌಡ ಪ್ರತಿಕ್ರಿಯಿಸಿದರು.

‘ಸುಪ್ರೀಂ ಕೋರ್ಟ್‌ ಆದೇಶವನ್ನು ನಾವು ಪಾಲಿಸುತ್ತೇವೆ. ಬುಧವಾರ ಗಣೇಶ ಪ್ರತಿಷ್ಠಾಪನೆಗೆ ನಾವು ಪ್ರಯತ್ನಿಸುವುದಿಲ್ಲ. ನ್ಯಾಯಕ್ಕಾಗಿ ನಾವು ಹೋರಾಡುತ್ತೇವೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ. ನಾವು ಚಾಮರಾಜಪೇಟೆ ಆಟದ ಮೈದಾನದಲ್ಲಿ ಅಲ್ಲದೆ ಬೇರೆಲ್ಲೂ ಗಣೇಶ ಪ್ರತಿಷ್ಠಾಪನೆ ಮಾಡೊಲ್ಲ. ನ್ಯಾಯ ಸಿಕ್ಕಿದ ಕೂಡಲೇ ಅಲ್ಲೇ ಗಣೇಶೋತ್ಸವ ಆಚರಿಸುತ್ತೇವೆ’ ಎಂದರು.

‘ವಕ್ಫ್‌ ತನ್ನ ಆಸ್ತಿ ಎಂದು ಹೇಳುತ್ತಿದೆ. ಆದರೆ, ಆಸ್ತಿ ಅವರಿಗೆ ಸೇರಿಲ್ಲ. ಈ ಬಗ್ಗೆ ನಮ್ಮಲ್ಲಿ ಸಾಕಷ್ಟು ದಾಖಲೆಗಳಿವೆ. ಅವುಗಳನ್ನು ನಾವು ನ್ಯಾಯಾಲಯದಲ್ಲಿ ಪ್ರಸ್ತುತ‍ಪಡಿಸಿ ನ್ಯಾಯ ಪಡೆಯುತ್ತೇವೆ. ಸರ್ಕಾರ ನಮಗೆ ಗಣೇಶೋತ್ಸವಕ್ಕೆ ಅವಕಾಶ ನೀಡಿತ್ತು. ಆದರೆ ಸುಪ್ರೀಂ ಕೋರ್ಟ್‌ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ. ಅದನ್ನು ಪಾಲಿಸುತ್ತೇವೆ. ಕಾನೂನು ಹೋರಾಟ ಮುಂದುವರಿಸುತ್ತೇವೆ’ ಎಂದರು.

ADVERTISEMENT

ಗಣೇಶೋತ್ಸವಕ್ಕೆ ವಿರೋಧ ಇಲ್ಲ: ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದಿಂದ ಹಿಂದೂ–ಮುಸ್ಲಿಂ ಭಾವೈಕ್ಯ ಮತ್ತು ಶಾಂತಿಯುತ ವಾತಾವರಣಕ್ಕೆ ಅವಕಾಶ ಸಿಕ್ಕಂತಾಗಿದೆ ಎಂದು ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್.ಕೆ. ಷಾಫಿ ಸಾ– ಆದಿ ಹೇಳಿದರು.

‘ಗಣೇಶೋತ್ಸವಕ್ಕೆ ನಮ್ಮ ವಿರೋಧ ಎಂದಿಗೂ ಇಲ್ಲ. 200 ವರ್ಷಗಳಿಂದ ನಮಾಜ್ ಮಾಡುತ್ತಿರುವ ಜಾಗ ಮತ್ತು ಸಾವಿರಾರು ಘೋರಿಗಳಿರುವ ಜಾಗವನ್ನು ಈದ್ಗಾ ಮೈದಾನವಾಗಿ ಉಳಿಸಬೇಕು ಎಂಬುದು ನಮ್ಮ ಹೋರಾಟ. ಬಿಬಿಎಂಪಿ ಜಂಟಿ ಆಯುಕ್ತರು ತಪ್ಪು ಮಾಹಿತಿ ನೀಡಿದ್ದರಿಂದ ಈ ಸಮಸ್ಯೆಗಳು ಎದುರಾಗಿವೆ. ಅವರಿಗೆ ಸುಪ್ರೀಂ ಕೋರ್ಟ್‌ ಕೂಡ ಛೀಮಾರಿ ಹಾಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.