ADVERTISEMENT

ಬೆಂಗಳೂರು ನಗರದೆಲ್ಲೆಡೆ ಗಣೇಶೋತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 15:35 IST
Last Updated 8 ಸೆಪ್ಟೆಂಬರ್ 2024, 15:35 IST
ಜೆ.ಪಿ. ನಗರದ ಪುಟ್ಟೇನಹಳ್ಳಿ ಶ್ರೀ ಸತ್ಯಗಣಪತಿ ದೇವಸ್ಥಾನ ಟ್ರಸ್ಟ್‌ನ ರೈತ ಗಣೇಶೋತ್ಸವದಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಜೆ.ಪಿ. ನಗರದ ಪುಟ್ಟೇನಹಳ್ಳಿ ಶ್ರೀ ಸತ್ಯಗಣಪತಿ ದೇವಸ್ಥಾನ ಟ್ರಸ್ಟ್‌ನ ರೈತ ಗಣೇಶೋತ್ಸವದಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.   

ಬೆಂಗಳೂರು: ನಗರದ ಎಲ್ಲೆಡೆ ಗಣೇಶೋತ್ಸವದ ಸಂಭ್ರಮ ಮನೆ ಮಾಡಿತ್ತು. ಮನೆಗಳು, ಅ‍ಪಾರ್ಟ್‌ಮೆಂಟ್‌ಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಲಾಯಿತು.

ಸಂಘ–ಸಂಸ್ಥೆಗಳು ತಮ್ಮ ಬಡಾವಣೆಗಳಲ್ಲಿ ವಿನಾಯಕನನ್ನು ಆರಾಧಿಸಿದವು. ಪುಟ್ಟ ಮಕ್ಕಳೂ ತಮ್ಮ ಗಲ್ಲಿಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ‌ಹಬ್ಬದ ಅಂಗವಾಗಿ ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ವಿದ್ಯುತ್‌ ಅಲಂಕಾರ ಮಾಡಲಾಗಿತ್ತು.

ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದ ವೇದಿಕೆಗಳು ವಿಶೇಷ ರಂಗು ಪಡೆದುಕೊಂಡಿದ್ದವು. ಮಂಟಪಗಳು ವಿದ್ಯುತ್‌ ಅಲಂಕಾರದಿಂದ ಕಂಗೊಳಿಸಿದವು.

ADVERTISEMENT

ಶುಕ್ರವಾರ ಬೆಳಿಗ್ಗೆ ಮಹಿಳೆಯರು ಮನೆಗಳಲ್ಲಿ ಗೌರಿ ಪೂಜೆ ನೆರವೇರಿಸಿದ್ದರು. ಶನಿವಾರ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲಾಯಿತು. ಸಿಹಿ ಖಾದ್ಯ ತಯಾರಿಸಲಾಗಿತ್ತು. ಮಕ್ಕಳು, ಮಹಿಳೆಯರು ಹಬ್ಬಕ್ಕೆ ಹೊಸಬಟ್ಟೆ ಧರಿಸಿ ಸಂಭ್ರಮಿಸಿದರು.

ನಗರದ ಬೀದಿ ಬೀದಿಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಿಸಲಾಯಿತು. ವಿವಿಧ ಬಳಗಗಳು ಗಣೇಶೋತ್ಸವದ ಅಂಗವಾಗಿ ರಂಗೋಲಿ ಸೇರಿದಂತೆ ಗ್ರಾಮೀಣ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದ್ದವು. ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ಭಕ್ತ ಪ್ರಹ್ಲಾದನಿಗೆ ಒಲಿದ ಉಗ್ರ ನರಸಿಂಹನ ಸ್ವರೂಪದ ಗಣೇಶ ಗಮನ ಸೆಳೆಯಿತು. ಮಿಲ್ಕ್‌ ಕಾಲೊನಿ ಸಹಿತ ಅನೇಕ ಕಡೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಗಣೇಶೋತ್ಸವ ನಡೆಯುತ್ತಿದೆ. ಮನೆಗಳಲ್ಲಿ ಬಹುತೇಕ ಒಂದೇ ದಿನ ಪೂಜೆ ನಡೆದರೆ, ಸಾರ್ವಜನಿಕ ಗಣೇಶೋತ್ಸವ ಮೂರು ದಿನ, ಐದು ದಿನ, ಏಳು ದಿನ ಹೀಗೆ ಹಲವು ದಿನ ಮುಂದುವರಿಯಲಿದೆ.

ವಿಸರ್ಜನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಶನಿವಾರ ಸಂಚಾರಿ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವತ, ತಾತ್ಕಾಲಿಕ ಕಲ್ಯಾಣಿಗಳಲ್ಲಿ 2,17,006 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ರೈತ ಗಣೇಶೋತ್ಸವ

ಜೆ.ಪಿ. ನಗರದ ಪುಟ್ಟೇನಹಳ್ಳಿ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ರೈತ ಗಣೇಶೋತ್ಸವ ಆಚರಿಸಲಾಯಿತು. ಕೃಷಿ ಉತ್ಪನ್ನಗಳಾದ 36 ಬಗೆಯ ಹಣ್ಣು ಹೂವುಗಳಿಂದ ಗಣೇಶನನ್ನು ಅಲಂಕರಿಸಲಾಗಿದೆ. ಜೋಳ ತೆಂಗಿನಕಾಯಿ ಬೇಲದ ಕಾಯಿ ಮೂಲಕ ಗಣೇಶ ಮೂರ್ತಿಯನ್ನು ಸಿಂಗರಿಸಲಾಗಿದೆ. ಗಣಪತಿಗೆ ಪ್ರಿಯವಾದ ವಸ್ತುಗಳನ್ನು ಬಳಸಲಾಗಿದೆ. ಬಳಸಿದ ಪ್ರತಿಯೊಂದು ಹಣ್ಣು ತರಕಾರಿ ವಸ್ತುಗಳನ್ನು ನಂತರ ಪ್ರಸಾದದ ರೂಪದಲ್ಲಿ ಭಕ್ತರಿಗೆ ವಿತರಿಸಲಾಗುವುದು ಎಂದು ದೇವಸ್ಥಾನದ ಟ್ರಸ್ಟಿ ರಾಮ್‌ ಮೋಹನ ರಾಜ್‌ ಮಾಹಿತಿ ನೀಡಿದರು.

ವಿಸರ್ಜನೆಯಾಗಿರುವ ಗಣೇಶ ಮೂರ್ತಿಗಳ ಅಂಕಿ ಅಂಶ (ವಲಯ;ಮೂರ್ತಿಗಳ ಸಂಖ್ಯೆ)

ಪೂರ್ವ ವಲಯ : 40,791

ಪಶ್ಚಿಮ ವಲಯ : 52,429

ದಕ್ಷಿಣ ವಲಯ : 84,149

ಬೊಮ್ಮನಹಳ್ಳಿ ವಲಯ : 3,915

ದಾಸರಹಳ್ಳಿ ವಲಯ : 1,719

ಮಹದೇವಪುರ ವಲಯ : 7,229

ಆರ್.ಆರ್.ನಗರ ವಲಯ : 12,680

ಯಲಹಂಕ ವಲಯ : 14,094

ಬೆಂಗಳೂರಿನ ಕಬ್ಬನ್ ಪೇಟೆ 25ನೇ ಅಡ್ಡ ರಸ್ತೆಯಲ್ಲಿ ಶ್ರೀ ವರಸಿದ್ಧಿ ವಿನಾಯಕ ಮಿತ್ರ ಮಂಡಳಿ ಪ್ರತಿಷ್ಠಾಪನೆ ಮಾಡಿರುವ ಭಕ್ತ ಪ್ರಹ್ಲಾದನಿಗೆ ಒಲಿದ ಉಗ್ರ ನರಸಿಂಹನ ಸ್ವರೂಪದಲ್ಲಿರುವ ಗಣೇಶ ವಿಗ್ರಹ ಜನರ ಗಮನ ಸೆಳೆಯಿತು.  ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.