ADVERTISEMENT

ಬೆಂಗಳೂರು | ಕೆರೆಯಲ್ಲಿ ಕರಗದ ಗಣಪ; ಮೂರ್ತಿ ಒಡೆಯಲು ಬಿಬಿಎಂಪಿ ಸಿಬ್ಬಂದಿ ಹರಸಾಹಸ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 23:00 IST
Last Updated 11 ಸೆಪ್ಟೆಂಬರ್ 2024, 23:00 IST
<div class="paragraphs"><p>ಹಲಸೂರು ಕೆರೆಯಲ್ಲಿ ವಿಸರ್ಜನೆಯಾದ ನಂತರ ಕರಗದೇ ಉಳಿದಿರುವ ಗಣೇಶ ಮೂರ್ತಿಗಳನ್ನು ಒಡೆಯಲು&nbsp; ಬಿಬಿಎಂಪಿ ಸಿಬ್ಬಂದಿ ಬುಧವಾರ ಹರಸಾಹಸ ಪಟ್ಟರು</p></div>

ಹಲಸೂರು ಕೆರೆಯಲ್ಲಿ ವಿಸರ್ಜನೆಯಾದ ನಂತರ ಕರಗದೇ ಉಳಿದಿರುವ ಗಣೇಶ ಮೂರ್ತಿಗಳನ್ನು ಒಡೆಯಲು  ಬಿಬಿಎಂಪಿ ಸಿಬ್ಬಂದಿ ಬುಧವಾರ ಹರಸಾಹಸ ಪಟ್ಟರು

   

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಬೆಂಗಳೂರು: ಪಿಒಪಿ ಸೇರಿದಂತೆ ಇತರೆ ವಸ್ತುಗಳಿಂದ ಮಾಡಿರುವ ಬೃಹತ್‌ ಗಾತ್ರದ ಗಣೇಶ ಮೂರ್ತಿಗಳು ಕೆರೆಯ ನೀರಿನಲ್ಲೂ ಕರಗುತ್ತಿಲ್ಲ. ವಿಸರ್ಜನೆಯಾದ ನಂತರದ ದಿನಗಳಲ್ಲಿ ಕೆರೆಯನ್ನು ಸ್ವಚ್ಛಗೊಳಿಸಬೇಕಾದ ಸಿಬ್ಬಂದಿ, ಮೂರ್ತಿಗಳನ್ನು ಒಡೆದು ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ADVERTISEMENT

ಹಲವು ರೀತಿಯ ಅರಿವಿನ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಯಲ್ಲೇ ಹಾಗೂ ಕೆಲವೊಂದು ಕಡೆ ಪಿಒಪಿ ಮೂರ್ತಿಗಳ ದಾಸ್ತಾನನ್ನು ಜಪ್ತಿ ಮಾಡಲಾಗಿತ್ತು. ಆದರೂ, ನಗರದಲ್ಲಿ ಪಿಒಪಿ ಮೂರ್ತಿಗಳನ್ನು ಪೂಜೆಗೆ ಬಳಸುವುದು ಈ ಬಾರಿಯೂ ನಿಲ್ಲಲಿಲ್ಲ. ‘ಪರಿಸರಸ್ನೇಹಿ ಮೂರ್ತಿಗಳನ್ನು ಪೂಜಿಸಿ’ ಎಂದು ಬಿಬಿಎಂಪಿ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ಕೆಲವು ಸಂಘ–ಸಂಸ್ಥೆಗಳೂ ಇದಕ್ಕೆ ಮನ್ನಣೆ ನೀಡುತ್ತಿಲ್ಲ. ಆದ್ದರಿಂದಲೇ, ಕೆರೆಗಳು, ಕಲ್ಯಾಣಿಗಳ ಬಳಿ ಮೂರ್ತಿಗಳ ಭಗ್ನಾವಶೇಷಗಳು ಕಾಣುತ್ತಿವೆ.

ಹಲಸೂರು ಕೆರೆಯಲ್ಲಿ ವಿಸರ್ಜನೆಯಾಗಿರುವ ದೊಡ್ಡ ಮೂರ್ತಿಗಳು ಕರಗಿಲ್ಲ. ಪಿಒಪಿ ಸೇರಿದಂತೆ ನಾರು, ಕಟ್ಟಿಗೆಯಂತಹ ಗಟ್ಟಿ ವಸ್ತುಗಳನ್ನು ಬಳಸಿ ತಯಾರಿಸಿರುವ ಮೂರ್ತಿಗಳಿವು. ಈ ಕರಗದ ಮೂರ್ತಿಗಳನ್ನು ಹೊರಕ್ಕೆ ತೆಗೆದಿರುವ ಬಿಬಿಎಂಪಿ ಸಿಬ್ಬಂದಿ, ಅವುಗಳ ಭಗ್ನಾವಶೇಷಗಳನ್ನು ವಿಂಗಡಿಸಲು ಹರಸಾಹಸ ಪಟ್ಟರು. ಕೊನೆಗೆ ಕೊಡಲಿ, ಸುತ್ತಿಗೆ, ಕ್ರೇನ್‌ಗಳ ಮೊರೆ ಹೊಕ್ಕರು.

ಕರಗದ ಮೂರ್ತಿಗಳನ್ನು ಒಡೆಯಲು ಸ್ವಚ್ಛತಾ ಸಿಬ್ಬಂದಿ ಸುತ್ತಿಗೆಗಳನ್ನು ಬಳಸಿದರು. ಅದರಿಂದಲೂ ಪುಡಿಯಾಗದ ಮೂರ್ತಿಗಳನ್ನು ಕ್ರೇನ್‌ಗಳ ಸಹಾಯದಿಂದ ಮೇಲಕ್ಕೆ ಎತ್ತಿ ಕೆಳಗೆ ಬಿಸಾಡಿದರು. ಆದರೂ ಅವು ಒಡೆದುಹೋಗಲಿಲ್ಲ. ಕೊಡಲಿಯಿಂದ ಕಟ್ಟಿಗೆ ಕಡಿಯುವಂತೆ ಸಿಗಿದರು. ಇಂತಹ ಹಲವು ರೀತಿಯ ಪ್ರಯತ್ನಗಳನ್ನು ಮಾಡಿ ತ್ಯಾಜ್ಯಗಳನ್ನು ಪ್ರತ್ಯೇಕಿಸಲು ಇನ್ನಿಲ್ಲದಂತೆ ಪ್ರಯತ್ನಪಟ್ಟರು.

‘ಹಲವು ರೀತಿಯ ಅರಿವು ಮೂಡಿಸಿದರೂ ನಾಗರಿಕರು ಪಿಒಪಿ ಹಾಗೂ ಕರಗದ ವಸ್ತುಗಳಿಂದ ತಯಾರಿಸಿದ ಮೂರ್ತಿಗಳನ್ನು ಬಳಸುತ್ತಿದ್ದಾರೆ. ಸ್ಥಾಪನೆ ಹಾಗೂ ವಿಸರ್ಜನೆ ವೇಳೆಯಲ್ಲಿ ವಿರೋಧಿಸಿದರೆ ಧಾರ್ಮಿಕ ಆಚರಣೆಗೆ ಅಡ್ಡಿಯಾಗುತ್ತಾರೆ ಎಂದು ದೂರುತ್ತಾರೆ. ನಾಗರಿಕರು ಅರಿತುಕೊಂಡು ಪರಿಸರಸ್ನೇಹಿ ಮೂರ್ತಿಗಳನ್ನು ಬಳಸಿದರೆ ಇಂತಹ ಭಗ್ನಾವಶೇಷಗಳು ಉಳಿಯುವುದಿಲ್ಲ. ನಾವೂ ಈ ರೀತಿ ಕಷ್ಟಪಡಬೇಕಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ನಮಗೆಷ್ಟು ಪಾಪ ಸುತ್ತಿಕೊಳ್ಳುತ್ತದೋ?’

‘ಗಣೇಶನನ್ನು ನಾವೂ ಪೂಜಿಸುತ್ತೇವೆ. ನಮ್ಮ ನೆಚ್ಚಿನ ದೈವ ಗಣಪ. ಆದರೆ ಅನಿವಾರ್ಯವಾಗಿ ನಾವು ಮೂರ್ತಿಗಳನ್ನು ಒಡೆಯಬೇಕಾಗಿದೆ. ನಮಗೆಷ್ಟು ಪಾಪ ಸುತ್ತಿಕೊಳ್ಳುತ್ತದೋ ಗೊತ್ತಿಲ್ಲ’ ಎಂದು ಹಲಸೂರು ಕೆರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಕಳವಳ ವ್ಯಕ್ತಪಡಿಸಿದರು. ‘ಹಲವು ಮೂರ್ತಿಗಳು ನೀರಿನಲ್ಲಿ ಕರಗುತ್ತಿಲ್ಲ. ಕೆರೆ ಸ್ವಚ್ಛ ಮಾಡಬೇಕಾಗಿದ್ದು ಅವುಗಳನ್ನೆಲ್ಲ ಹೊರ ತೆಗೆಯಲಾಗುತ್ತದೆ. ತ್ಯಾಜ್ಯವನ್ನೆಲ್ಲ ಒಂದಡೆ ಹಾಕಿದರೆ ಅದನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಪಿಒಪಿ ಹಾಗೂ ಇತರೆ ವಸ್ತುಗಳಿಂದ ಮಾಡಿರುವ ಮೂರ್ತಿಗಳು ಒಂದೆರಡು ದಿನ ನೀರಿನಲ್ಲಿದ್ದರೂ ಪೂರ್ಣ ಕರಗಿಲ್ಲ. ಅವುಗಳನ್ನು ಒಡೆದು ಭಾಗಗಳನ್ನಾಗಿ ಮಾಡುತ್ತಿದ್ದೇವೆ. ಈ ಕೆಲಸ ಮಾಡಲು ಮನಸ್ಸಿಲ್ಲದಿದ್ದರೂ ಅನಿವಾರ್ಯವಾಗಿ ಮಾಡಲೇಬೇಕಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.