ಪೀಣ್ಯ ದಾಸರಹಳ್ಳಿ: ಇಲ್ಲಿನ ಬಾಗಲಗುಂಟೆ ಎಂಇಐ ಆಟದ ಮೈದಾನದಲ್ಲಿ ದಾಸರಹಳ್ಳಿಯ ಸಾಮೂಹಿಕ ಗಣೇಶೋತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಭಾನುವಾರ ಸಂಜೆ ಸಂಭ್ರಮದ ಮೆರವಣಿಗೆಯೊಂದಿಗೆ ಚೊಕ್ಕಸಂದ್ರ ಕೆರೆ ಸಮೀಪವಿರುವ ಕಲ್ಯಾಣಿಯಲ್ಲಿ ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ 75ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಇದ್ದವು. ಪಂಜಾಬ್, ಗುಜರಾತ್, ಮುಂಬೈ, ಕೇರಳ ಕರ್ನಾಟಕ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ನೂರಾರು ಯುವಕರು, ಮಹಿಳೆಯರು, ಭಕ್ತಾದಿಗಳು ಕಲಾತಂಡಗಳ ವಾದ್ಯ ಸಂಗೀತಕ್ಕೆ ಹೆಜ್ಜೆ ಹಾಕಿದರು.
ಎಂ.ಇ.ಐ ಆಟದ ಮೈದಾನದಿಂದ ಆರಂಭವಾದ ಮೆರವಣಿಗೆ ಬಾಗಲಗುಂಟೆ ಮಾರಮ್ಮನ ದೇವಸ್ಥಾನ, ಹೆಸರಘಟ್ಟ ಮುಖ್ಯ ರಸ್ತೆ, ಮಲ್ಲಸಂದ್ರದ ಪೈಪ್ ಲೈನ್, ಸೆಲೆಕ್ಷನ್‌ನಿಂದ ದಾಸರಹಳ್ಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಚೊಕ್ಕಸಂದ್ರದತ್ತ ಸಾಗಿತು.
ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಗಣೇಶನ ಪ್ರಸಾದ 25 ಕೆ.ಜಿ. ಲಡ್ಡುವನ್ನು ಬಿಜೆಪಿ ಮುಖಂಡ ಚಿಕ್ಕಸಂದ್ರದ ಮೋಹನ್ ಕುಮಾರ್ ಜಿ. ಅವರು ₹4.50 ಲಕ್ಷಕ್ಕೆ ಹರಾಜಿನಲ್ಲಿ ಖರೀದಿಸಿದರು.
ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿ ವತಿಯಿಂದ ಬಾಗಲಗುಂಟೆ ಎಂಇಐ ಆಟದ ಮೈದಾನದಲ್ಲಿ ಶುಕ್ರವಾರ 14 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಅಂದು ಸಂಜೆ ಸೂರಜ್ ಫೌಂಡೇಶನ್ ಸಂಸ್ಥಾಪಕಿ ಸುಜಾತ ಮುನಿರಾಜು ನೇತೃತ್ವದಲ್ಲಿ ಮಹಿಳೆಯರಿಗಾಗಿ ರಂಗೋಲಿ, ಗಾಯನ, ನೃತ್ಯ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಗಿಚ್ಚಿ ಗಿಲಿಗಿಲಿ ಖ್ಯಾತಿಯ ರಾಘವೇಂದ್ರ (ರಾಗಿಣಿ) ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಶನಿವಾರ ಸಂಜೆ ಖ್ಯಾತ ಗಾಯಕ ರಘು ದೀಕ್ಷಿತ್ ತಂಡದವರು ಸಂಗೀತ ರಸಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.