ADVERTISEMENT

22 ವರ್ಷಗಳ ಬಳಿಕ ಮಹಿಳಾ ಜೋಡಿ

33 ವರ್ಷಗಳ ಬಳಿಕ ಲಿಂಗಾಯತರ ಕೈಗೆ ಬಿಬಿಎಂಪಿ ಆಡಳಿತ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 20:31 IST
Last Updated 28 ಸೆಪ್ಟೆಂಬರ್ 2018, 20:31 IST
ನೂತನ ಮೇಯರ್‌ ಗಂಗಾಂಬಿಕೆ ಮತ್ತು ಉಪ ಮೇಯರ್‌ ರಮೀಳಾ ಉಮಾಶಂಕರ್‌ ಅವರಿಗೆ ನಿಕಟಪೂರ್ವ ಮೇಯರ್‌ ಆರ್‌.ಸಂಪತ್‌ರಾಜ್‌ ಅವರು ನಾಡಪ್ರಭು ಕೆಂಪೇಗೌಡರ ಬೆಳ್ಳಿ ಪ್ರತಿಮೆಯನ್ನು ಹಾಗೂ ಆಯುಕ್ತ ಮಂಜುನಾಥ ಪ್ರಸಾದ್  ಅವರು ಬೆಳ್ಳಿಯ ಕೀಲಿ ಕೈಯನ್ನು ನೀಡಿದರು.  ಸದಸ್ಯರಾದ ಆರ್‌.ಎಸ್‌.ಸತ್ಯನಾರಾಯಣ, ಎಂ.ಶಿವರಾಜ್‌, ಶಾಸಕ ಮುನಿರತ್ನ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಇದ್ದರು–ಪ್ರಜಾವಾಣಿ ಚಿತ್ರ
ನೂತನ ಮೇಯರ್‌ ಗಂಗಾಂಬಿಕೆ ಮತ್ತು ಉಪ ಮೇಯರ್‌ ರಮೀಳಾ ಉಮಾಶಂಕರ್‌ ಅವರಿಗೆ ನಿಕಟಪೂರ್ವ ಮೇಯರ್‌ ಆರ್‌.ಸಂಪತ್‌ರಾಜ್‌ ಅವರು ನಾಡಪ್ರಭು ಕೆಂಪೇಗೌಡರ ಬೆಳ್ಳಿ ಪ್ರತಿಮೆಯನ್ನು ಹಾಗೂ ಆಯುಕ್ತ ಮಂಜುನಾಥ ಪ್ರಸಾದ್  ಅವರು ಬೆಳ್ಳಿಯ ಕೀಲಿ ಕೈಯನ್ನು ನೀಡಿದರು.  ಸದಸ್ಯರಾದ ಆರ್‌.ಎಸ್‌.ಸತ್ಯನಾರಾಯಣ, ಎಂ.ಶಿವರಾಜ್‌, ಶಾಸಕ ಮುನಿರತ್ನ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಇದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು:ಮೇಯರ್‌ ಹಾಗೂ ಉಪಮೇಯರ್‌ ಹುದ್ದೆಗಳೆರಡೂ ಮತ್ತೆ ಮಹಿಳೆಯರಿಗೆ ದಕ್ಕಿದ್ದು 22 ವರ್ಷಗಳ ಬಳಿಕ. 1996–97ರಲ್ಲಿ ಪದ್ಮಾವತಿ ಗಂಗಾಧರ ಗೌಡ ಮೇಯರ್‌ ಹಾಗೂ ವೆಂಕಟಲಕ್ಷ್ಮೀ ಅವರು ಉಪಮೇಯರ್‌ ಆಗಿದ್ದರು.

ಗಂಗಾಂಬಿಕೆ ಮೇಯರ್‌ ಆಗುವುದರೊಂದಿಗೆ 33 ವರ್ಷಗಳ ಬಳಿಕ ಬಿಬಿಎಂಪಿ ಆಡಳಿತ ಚುಕ್ಕಾಣಿ ಮತ್ತೆ ಲಿಂಗಾಯತರ ಕೈಗೆ ಸಿಕ್ಕಂತಾಗಿದೆ. 1986ರಲ್ಲಿ ಬಿ.ವಿ.ಪುಟ್ಟೇಗೌಡ ಅವರು ಮೇಯರ್‌ ಆದ ಬಳಿಕ ಲಿಂಗಾಯತ ಸಮುದಾಯದ ಯಾರೂ ಇದುವರೆಗೆ ಮೇಯರ್‌ ಆಗಿರಲಿಲ್ಲ.

ಯಾರಿಂದ ನಾಮಪತ್ರ?: ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಗಂಗಾಂಬಿಕೆ ಹಾಗೂ ಬಿಜೆಪಿಯಿಂದ ಪದ್ಮನಾಭನಗರ ವಾರ್ಡ್‌ ಸದಸ್ಯೆ ಶೋಭಾ ಆಂಜನಪ್ಪ, ಉಪಮೇಯರ್‌ ಸ್ಥಾನಕ್ಕೆ ಜೆಡಿಎಸ್‌ನಿಂದ ರಮೀಳಾ ಉಮಾಶಂಕರ್‌ ಹಾಗೂ ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್‌ನ ಪ್ರತಿಭಾ ಧನರಾಜ್‌ ನಾಮಪತ್ರ ಸಲ್ಲಿಸಿದ್ದರು.

ADVERTISEMENT

ಮೇಯರ್‌ ಸ್ಥಾನಕ್ಕೆ ನಡೆದ ಮತದಾನದಲ್ಲಿ ಗಂಗಾಂಬಿಕೆ ಪರ 130 ಹಾಗೂ ಉಪಮೇಯರ್‌ ಸ್ಥಾನಕ್ಕೆ ನಡೆದ ಮತದಾನದಲ್ಲಿ ರಮೀಳಾ ಪರ 129 ಮತಗಳು ಚಲಾವಣೆಯಾದವು.

ಜೆಡಿಎಸ್‌ನ ಮಂಜುಳಾ ನಾರಾಯಣಸ್ವಾಮಿ ಅವರು ಗಂಗಾಂಬಿಕೆ ಪರ ಮತ ಚಲಾಯಿಸಿದರು. ಉಪಮೇಯರ್‌ ಆಯ್ಕೆಗೆ ಮತದಾನ ನಡೆಯುವಾಗ ಸಭಾಂಗಣದಿಂದ ಹೊರ ನಡೆದರು. ಹಾಗಾಗಿ ರಮೀಳಾ ಅವರು ಗಂಗಾಂಬಿಕೆ ಅವರಿಗಿಂತ ಒಂದು ಮತ ಕಡಿಮೆ ಪಡೆದರು.

**

‘ಹೈಕೋರ್ಟ್‌ ಮಧ್ಯಪ್ರವೇಶದ ಸ್ಥಿತಿ ಬಾರದು’

ಬೆಂಗಳೂರು: ‘ರಸ್ತೆ ಗುಂಡಿ ಮುಚ್ಚುವುದೂ ಸೇರಿದಂತೆ, ಪಾಲಿಕೆ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶ ಮಾಡುವ ಪರಿಸ್ಥಿತಿ ನನ್ನ ಅವಧಿಯಲ್ಲಿ ಉಂಟಾಗದು’

ನೂತನ ಮೇಯರ್‌ ಗಂಗಾಂಬಿಕೆ ಅವರ ವಾಗ್ದಾನವಿದು.

ಅಧಿಕಾರ ವಹಿಸಿಕೊಂಡ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

* ನಿಮ್ಮ ಆದ್ಯತೆ ಯಾವುದಕ್ಕೆ?

ನಗರದ ಸ್ವಚ್ಛತೆ ಕಾಪಾಡುವುದು, ಆರೋಗ್ಯ ಮತ್ತು ಪರಿಸರ ರಕ್ಷಣೆ. ಬೆಂಗಳೂರು ಮತ್ತೆ ಉದ್ಯಾನ ನಗರ, ಹಸಿರು ನಗರ ಹಾಗೂ ಕಸಮುಕ್ತ ನಗರ ಆಗಬೇಕೆಂಬುದು ನನ್ನ ಆಶಯ.

* ಕಸ ವಿಂಗಡಣೆಯಲ್ಲಿ ಪಾಲಿಕೆ ಪರಿಪೂರ್ಣತೆ ಸಾಧಿಸುವುದು ಯಾವಾಗ?

ಇದಕ್ಕೆ ಜನರ ಸಹಭಾಗಿತ್ವ ಮುಖ್ಯ. 198 ಸದಸ್ಯರಿಂದಲೂ ಸಲಹೆ ಪಡೆದು ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ರೂಪಿಸುತ್ತೇನೆ. ಈ ವಿಚಾರದಲ್ಲಿ ಪಾಲಿಕೆ ಸದಸ್ಯರೇ ಮೇಲ್ಪಂಕ್ತಿ ಹಾಕಿಕೊಡುವ ಮೂಲಕ ಮಾದರಿಯಾಗಲಿದ್ದಾರೆ.

* ರಾಜಕಾಲುವೆ ಒತ್ತುವರಿ ತೆರವು ಅರ್ಧಕ್ಕೆ ನಿಂತಿದೆಯಲ್ಲಾ?

ಒತ್ತುವರಿ ಬಗ್ಗೆ ಸರ್ವೆ ನಡೆದಿದೆ. ತೆರವು ಕಾರ್ಯ ಕೆಲವು ಕಡೆ ಪ್ರಗತಿಯಲ್ಲಿದ್ದು, ಇದನ್ನು ಇನ್ನಷ್ಟು ಚುರುಕುಗೊಳಿಸುತ್ತೇವೆ

* ಪಾಲಿಕೆಯನ್ನು ಆರ್ಥಿಕವಾಗಿ ಸದೃಢ ಮಾಡಲು ಯೋಜನೆಗಳೇನು?

ಪಾಲಿಕೆ ಸಮಗ್ರ ಅಭಿವೃದ್ಧಿ ನನ್ನ ಗುರಿ. ಇದಕ್ಕಾಗಿ ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಬೇಕಾಗಿದೆ. ವರಮಾನ ಸೋರಿಕೆ ಪತ್ತೆ ಹಚ್ಚಿ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ.

* ಎರಡು ಜಡೆ ಸೇರಿದರೆ ಜಗಳ ಜಾಸ್ತಿ ಎಂಬ ಮಾತಿದೆಯಲ್ಲ?

ಅದು ಸಂಸಾರಕ್ಕೆ ಮಾತ್ರ ಅನ್ವಯ. ನಾನು ಹಾಗೂ ಉಪಮೇಯರ್‌ ಪರಸ್ಪರ ಸಮನ್ವಯದಿಂದ ಕೆಲಸ ಮಾಡುತ್ತೇವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.