ADVERTISEMENT

ಬಿಎಸ್‌ಡಬ್ಲ್ಯುಎಂಎಲ್‌ಗೆ ಗ್ಯಾಂಗ್ಟಕ್ ನಿಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 15:53 IST
Last Updated 24 ಜುಲೈ 2024, 15:53 IST
ಸಿಕ್ಕಿಂ ರಾಜ್ಯದ ಗಾಂಗ್ಟಕ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ನೇತೃತ್ವದ ನಿಯೋಗವು ಬುಧವಾರ ಬಿಬಿಎಂಪಿಗೆ ಭೇಟಿ ನೀಡಿ ಮುಖ್ಯ ಆಯುಕ್ತರೊಂದಿಗೆ ಚರ್ಚೆ ನಡೆಸಿತು
ಸಿಕ್ಕಿಂ ರಾಜ್ಯದ ಗಾಂಗ್ಟಕ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ನೇತೃತ್ವದ ನಿಯೋಗವು ಬುಧವಾರ ಬಿಬಿಎಂಪಿಗೆ ಭೇಟಿ ನೀಡಿ ಮುಖ್ಯ ಆಯುಕ್ತರೊಂದಿಗೆ ಚರ್ಚೆ ನಡೆಸಿತು   

ಬೆಂಗಳೂರು: ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಅಧ್ಯಯನ ಮಾಡಲು ಸಿಕ್ಕಿಂ ರಾಜ್ಯದ ಗ್ಯಾಂಗ್ಟಕ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ನೇತೃತ್ವದ ನಿಯೋಗವು ಬಿಎಸ್‌ಡಬ್ಲ್ಯುಎಂಎಲ್‌ ಮತ್ತು ಬಿಬಿಎಂಪಿಗೆ ಬುಧವಾರ ಭೇಟಿ ನೀಡಿತು.

ಗ್ಯಾಂಗ್ಟಕ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ನೆಲ್ ಬಹದ್ದೂರ್ ಚೆಟ್ರಿ ಮತ್ತು ಉಪ ಮೇಯರ್ ಶೆರಿಂಗ್ ಪಾಲ್ಡೆನ್ ಭುಟಿಯಾ ನೇತೃತ್ವದ ನಿಯೋಗವು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಘಟಕಕ್ಕೆ ಭೇಟಿ ನೀಡಿತು. ಘನತ್ಯಾಜ್ಯ ನಿರ್ವಹಣೆ, ಪಾಲಿಕೆಯ ಪಾತ್ರ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್‌) ಪಾತ್ರ, ತ್ಯಾಜ್ಯ ವಿಂಗಡಣೆ ಬಗ್ಗೆ ನಿಯೋಗದವರು ಮಾಹಿತಿ ಪಡೆದುಕೊಂಡರು.

ಮಿನಿ ಟ್ರಾನ್ಸ್‌ಫರ್‌ ಸ್ಟೇಷನ್ಸ್, ದ್ವಿತೀಯ ಟ್ರಾನ್ಸ್‌ಫರ್‌ ಸ್ಟೇಷನ್ಸ್, ತ್ಯಾಜ್ಯ ಸಂಸ್ಕರಣಾ ಘಟಕಗಳು, ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ನೂತನ ಘಟಕ, ಇನ್ನಿತರ ವಿಚಾರಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.

ADVERTISEMENT

ಬಿಬಿಎಂಪಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೊಂದಿಗೆ ಘನತ್ಯಾಜ್ಯ ನಿರ್ವಹಣೆ ಕಾರ್ಯನಿರ್ವಹಣೆಯ ಕುರಿತು ಚರ್ಚಿಸಿದರು. ಗ್ಯಾಂಗ್ಟಕ್ ಮುನ್ಸಿಪಲ್ ಕಾರ್ಪೊರೇಷನ್‌ ವ್ಯಾಪ್ತಿಯಲ್ಲಿ ಒಂದು ಲಕ್ಷ ಜನಸಂಖ್ಯೆಯಿದ್ದು, ನಿತ್ಯ 70 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ನಿಯೋಗದವರು ವಿಷಯ ಹಂಚಿಕೊಂಡರು.

ಬಿಎಸ್‌ಡಬ್ಲ್ಯುಎಂಎಲ್ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಮಾಮಣಿ, ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ, ಗ್ಯಾಂಗ್ಟಕ್ ಮಹಾನಗರ ಪಾಲಿಕೆ ಆಯುಕ್ತ ಆರ್.ಬಿ. ಭಂಡಾರಿ, ನಗರಾಬಿವೃದ್ಧಿ ಇಲಾಖೆಯ ಪ್ರಧಾನ ಮುಖ್ಯ ಎಂಜಿನಿಯರ್ ಶೈಲೇಂದ್ರ ಶರ್ಮಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.