ರಾಜರಾಜೇಶ್ವರಿನಗರ: ಕೊಮ್ಮಘಟ್ಟ ಗ್ರಾಮದಿಂದ ಕೊಮ್ಮಘಟ್ಟದ ಬಂಗ್ಲೆ ಕ್ರಾಸ್‌ವರೆಗೆ ರಸ್ತೆಯ ಎರಡೂ ಬದಿಯಲ್ಲಿ ಕಸದ ರಾಶಿಗಳು ಬಿದ್ದಿವೆ. ದ್ವಿಚಕ್ರ ವಾಹನಗಳಲ್ಲಿ ಹೋಗುವವರು ತಂದು ಹಾಕಿರುವ ಕಸದ ದುರ್ವಾಸನೆಗೆ ಸ್ಥಳೀಯರು ಕಂಗಾಲಾಗಿದ್ದಾರೆ.
ಕೊಮ್ಮಘಟ್ಟ ಸುತ್ತಲಿನ ಬಡಾವಣೆಗಳ ನಿವಾಸಿಗಳು, ಬಿಬಿಎಂಪಿ ವ್ಯಾಪ್ತಿಯ ನಿವಾಸಿಗಳು ಮನೆಯ ಕಸ, ತ್ಯಾಜ್ಯವನ್ನು ಕವರ್‌ನಲ್ಲಿ ಕಟ್ಟಿ ದ್ವಿಚಕ್ರವಾಹನಗಳಲ್ಲಿ ಬಂದು ರಸ್ತೆಯ ಬದಿಯಲ್ಲಿ ಬಿಸಾಡುತ್ತಿದ್ದಾರೆ. ಕಸ, ಕೋಳಿ, ಮೇಕೆ, ಕುರಿಗಳ ತ್ಯಾಜ್ಯ, ಲಿವರ್, ಮೂಳೆ ಸೇರಿ ಕೊಳೆತು ದುರ್ವಾಸನೆ ಬೀರುತ್ತಿದೆ. ಇದರ ಜೊತೆಗೆ ಮದ್ಯದ ಖಾಲಿ ಬಾಟಲ್, ಪ್ಲಾಸ್ಟಿಕ್ ಕವರ್, ಆಸ್ಪತ್ರೆಯ ನಿರುಪಯುಕ್ತ ವಸ್ತುಗಳೂ ಬಂದು ಬೀಳುತ್ತಿವೆ.
ಕೊಳೆತ ತರಕಾರಿ, ಹಣ್ಣು, ಹೂವು, ಮಾವಿನ ಹಣ್ಣು, ಹಲಸಿನ ಹಣ್ಣು, ಮಾಂಸದ ತುಂಡುಗಳನ್ನು ತಂದು ಸುರಿಯುವುದರಿಂದ ಸೊಳ್ಳೆ, ನೊಣಗಳ ಹಾವಳಿ ಹೆಚ್ಚಾಗಿದೆ. ಚೀಲಗಳಲ್ಲೂ ಕಸವನ್ನು ತಂದು ಹಾಕಲಾಗುತ್ತಿದೆ. ಸಾಂಕ್ರಾಮಿಕ ರೋಗದ ಭಯದಿಂದ ಜೀವನ ನಡೆಸಬೇಕು. ಗಾಳಿ ಬೀಸಿದಾಗ ದುರ್ವಾಸನೆಯ ವಿಷಕಾರಿ ಗಾಳಿ ಬೀಸುತ್ತಿದೆ ಎಂದು ಸ್ಥಳೀಯರಾದ ಆರ್. ತನುಜ, ಸವಿತಾ ಬೇಸರ ವ್ಯಕ್ತಪಡಿಸಿದರು.
‘ಕೊಮ್ಮಘಟ್ಟ ಕೆರೆಯ ಪ್ರದೇಶದ ಬಳಿ ಬಿಬಿಎಂಪಿ ಮತ್ತು ಕೆಲವು ಬಡಾವಣೆಯ ತ್ಯಾಜ್ಯ, ಕಸವನ್ನು ಸುರಿದು ಬೆಂಕಿ ಹಚ್ಚಿದಾಗ ಹೊಗೆ ಮತ್ತು ಬೂದಿ ಮನೆಗಳಿಗೆ ಬರುತ್ತಿದೆ. ನಮ್ಮ ಕಷ್ಟವನ್ನು ಯಾರಿಗೆ ಹೇಳುವುದು. ಶ್ರೀಮಂತರು ವಾಸಿಸುವ ಸ್ಥಳಗಳಲ್ಲಿ ಕಸ ಸುರಿದಿದ್ದರೆ, ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ವಾಟ್ಸ್‌ಆ್ಯಪ್, ಟ್ವಿಟರ್‌ಗಳಲ್ಲಿ ಹಾಕಿ ಜರೆಯುತ್ತಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳು ಕಸ ಸುರಿಯದಂತೆ ನೋಡಿಕೊಳ್ಳುತ್ತಿದ್ದರು. ಬಡವರು ವಾಸಿಸುವ ಈ ಪ್ರದೇಶಗಳಲ್ಲಿ ಕೇಳುವವರಿಲ್ಲ’ ಎಂದು ಅಳಲು ತೋಡಿಕೊಂಡರು.
ಕೊಮ್ಮಘಟ್ಟದಿಂದ ಬಂಗ್ಲೆ ಕ್ರಾಸ್‌ವರೆಗಿನ ರಸ್ತೆಯ ಎರಡು ಬದಿಯಲ್ಲಿ ಹೊರಗಡೆಯಿಂದ ಚೀಲ ಮತ್ತು ಪ್ಲಾಸ್ಟಿಕ್ ಕವರ್‌ಗಳನ್ನು ತಂದು ಹಾಕುತ್ತಾರೆ. ಬಂಗ್ಲೆ ಬಳಿಯ ಅಶ್ವತ್ಥಕಟ್ಟೆ ಬಳಿ ಹಳೆಯ ದೇವರ ಫೋಟೊಗಳನ್ನು ಬಿಸಾಡಿ ಹೋಗುತ್ತಾರೆ. ಗಾಜುಗಳು ಒಡೆದು ನಾಗರಿಕರು ನಡೆಯಲು ಸಾಧ್ಯವಾಗುತ್ತಿಲ್ಲ. ತ್ಯಾಜ್ಯವನ್ನು ತಿಂದು ಹಲವಾರು ನವಿಲುಗಳು ಸಾವನಪ್ಪಿವೆ ಎಂದು ಗೃಹಿಣಿ ಸೌಮ್ಯ ಬೇಸರ ವ್ಯಕ್ತಪಡಿಸಿದರು.
‘ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಬಡಾವಣೆ, ಗ್ರಾಮಗಳು ಬರುವುದರಿಂದ ಕಸದ ಸಮಸ್ಯೆ ಬಿಗಾಡಯಿಸಿದೆ. ಆದ್ಯತೆ ಮೇಲೆ ಕಸದ ಸಮಸ್ಯೆ ಬಗೆ ಹರಿಸುತ್ತೇವೆ. ಬಿಬಿಎಂಪಿ ವ್ಯಾಪ್ತಿಯಿಂದ ಕಸ ತಂದು ಸುರಿಯುವುದನ್ನು ತಪ್ಪಿಸಲು ಹಲವು ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿಲ್ಲ’ ಎಂದು ಸೂಲಿಕೆರೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಮತಾ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.