ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರ ನಗರಸಭೆ ವ್ಯಾಪ್ತಿಯಲ್ಲಿನ ಕಸದ ಸಮಸ್ಯೆ ಬಗೆಹರಿದಿಲ್ಲ. ಎಲ್ಲಿ ನೋಡಿದರೂ ರಾಶಿ ರಾಶಿ ಕಸ ಇದರಿಂದ ಬೇಸತ್ತ ಜನರು ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಚಿಕ್ಕಬಾಣಾವರ ವ್ಯಾಪ್ತಿಯ ಗಣಪತಿ ನಗರ ರಸ್ತೆಯ ಅಕ್ಕಪಕ್ಕದಲ್ಲಿ, ಹೆಸರಘಟ್ಟ ಮುಖ್ಯರಸ್ತೆ, ಅಂಗನವಾಡಿ ಮುಂಭಾಗ, ಎನ್ ಆರ್ ಆರ್ ಕಾಲೇಜು ರಸ್ತೆ, ಕೆರೆ ರಸ್ತೆ, ಅಬ್ಬಿಗೆರೆ ರಸ್ತೆ, ದ್ವಾರಕಾ ನಗರ ರಸ್ತೆ ಅಕ್ಕಪಕ್ಕದಲ್ಲಿ ಕಸದ ರಾಶಿ ಇದೆ.
‘ಈ ಭಾಗದಲ್ಲಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಕಸದ ಸಮಸ್ಯೆ ಬಗ್ಗೆ ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಯ ನೀರಿಗೆ ಕೊಳೆತ ಕಸ ದುರ್ನಾತ ಬೀರಿ ಸಾಂಕ್ರಾಮಿಕ ರೋಗ ಹರಡುವಂತಾಗಿದೆ. ಕೊಳೆತ ಕಸದಲ್ಲಿ ನೊಣ, ಸೊಳ್ಳೆಗಳು ಹೆಚ್ಚಾಗಿ ಜನರು ಭಯಭೀತರಾಗಿದ್ದಾರೆ. ಕೆಲವೊಂದು ಬೀಡಾಡಿ ಹಸುಗಳು, ನಾಯಿಗಳು ಕಸವನ್ನು ರಸ್ತೆಗೆಲ್ಲ ಹರಡಿ ಪರಿಸರವನ್ನು ಹಾಳು ಮಾಡುತ್ತಿವೆ.
‘ಹಲವು ಬಾರಿ ಕಸದ ಸಮಸ್ಯೆಯ ಬಗ್ಗೆ ದೂರು ನೀಡಿದ್ದೇವೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ವಾಹನ ಮತ್ತು ಕಾರ್ಮಿಕರ ಸಮಸ್ಯೆ ಹೇಳುತ್ತಾರೆ. ಇಲ್ಲಿ ರಾತ್ರಿ ವೇಳೆ ಕಸ ತಂದು ಹಾಕುತ್ತಾರೆ. ಅದನ್ನು ವಿಲೇವಾರಿ ಮಾಡುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಹನುಮಂತ ರಾಜು ಬೇಸರ ವ್ಯಕ್ತಪಡಿಸಿದರು.
‘ಕಸದ ಸಮಸ್ಯೆ ತುಂಬಾ ದಿನಗಳಿಂದ ಇದೆ. ಕಸ ತೆಗೆದುಕೊಂಡು ಹೋಗಿ ಸೋಮಶೆಟ್ಟಿಹಳ್ಳಿಯ ಜಾಗಕ್ಕೆ ಹಾಕಬೇಕು. ಅಲ್ಲಿ ಸಾರ್ವಜನಿಕರು ವಿರೋಧಿಸುತ್ತಿದ್ದಾರೆ. ಮುಖ್ಯ ಅಧಿಕಾರಿ ಅವರು ಕೂಡ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಕಸವನ್ನು ಒಂದೆಡೆ ಸುರಿಯಲು ಜಾಗ ಹುಡುಕಲಾಗುತ್ತಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಪುರಸಭೆ ಪರಿಸರ ಅಭಿಯಂತರ ಹರೀಶ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.