ADVERTISEMENT

ಗತ ಸಾಲಿನ ಕಸಕ್ಕೆ ಹೊಸ ವರ್ಷದಲ್ಲಿ ಹುಡುಕಾಟ

‘ದಿ ಅಗ್ಲಿ ಇಂಡಿಯನ್‌,’ ಬಿಬಿಎಂಪಿ ವತಿಯಿಂದ ಸ್ಪರ್ಧೆ *ಪೌರಕಾರ್ಮಿಕರಿಂದ 10 ಟನ್‌ ತ್ಯಾಜ್ಯ ತೆರವು

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 22:38 IST
Last Updated 1 ಜನವರಿ 2020, 22:38 IST
ಹೊಸ ವರ್ಷದ ಹಿನ್ನೆಲೆಯಲ್ಲಿ ವೈಯಾಲಿಕಾವಲ್‌ನ ತಿರುಪತಿ ತಿರುಮಲ ದೇವಸ್ಥಾನದಲ್ಲಿ (ಟಿಟಿಡಿ) ಬುಧವಾರ ವಿಶೇಷ ಪೂಜೆಗಳು ನಡೆ‌‌ದವು– ಪ್ರಜಾವಾಣಿ ಚಿತ್ರಗಳು
ಹೊಸ ವರ್ಷದ ಹಿನ್ನೆಲೆಯಲ್ಲಿ ವೈಯಾಲಿಕಾವಲ್‌ನ ತಿರುಪತಿ ತಿರುಮಲ ದೇವಸ್ಥಾನದಲ್ಲಿ (ಟಿಟಿಡಿ) ಬುಧವಾರ ವಿಶೇಷ ಪೂಜೆಗಳು ನಡೆ‌‌ದವು– ಪ್ರಜಾವಾಣಿ ಚಿತ್ರಗಳು   
""
""

ಬೆಂಗಳೂರು: ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ರೆಸಿಡೆನ್ಸಿ ರಸ್ತೆಗಳಲ್ಲಿ ಮಂಗಳವಾರ ರಾತ್ರಿ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮ ನೆಲೆಸಿದ್ದರೆ, ಬುಧವಾರ ಕಸ ಹೆಕ್ಕುವ ಹುರುಪು ಕಂಡುಬಂತು.

ಹೊಸ ವರ್ಷಾಚರಣೆ ಸಲುವಾಗಿ ಮೋಜು– ಮಸ್ತಿ ಮಾಡಿದವರು ಬಿಸಾಡಿ ಹೋದ ಕಸವನ್ನು, ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುವ ಸ್ವಯಂಸೇವಕರು ಶುಚಿಗೊಳಿಸಿದರು.

ಹೊಸ ವರ್ಷಾಚರಣೆ ವೇಳೆ ಸಾವಿರಾರು ಜನ ಸೇರಿದ್ದ ಈ ರಸ್ತೆಗಳಲ್ಲಿ ಬಿದ್ದ ಕಸ ಹೆಕ್ಕುವುದಕ್ಕಾಗಿಯೇ ‘ದಿ ಅಗ್ಲಿ ಇಂಡಿಯನ್’ ಸಂಸ್ಥೆ ಬಿಬಿಎಂಪಿ ಸಹಯೋಗದಲ್ಲಿ ಕಸ ಹುಡುಕುವ ಸ್ಪರ್ಧೆ ಏರ್ಪಡಿಸಿತ್ತು.

ADVERTISEMENT

ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಕಸ ಹುಡುಕುವ ಸ್ಪರ್ಧೆಯನ್ನು ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಹೆಚ್ಚು ಕಸ ಹುಡುಕಿದವರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿತ್ತು. ಕಸ ಬಿದ್ದಿರುವ ಕಡೆ ತಮ್ಮ ಸೆಲ್ಫಿ ಕಳುಹಿಸುವಂತೆಯೂ ಸೂಚನೆ ನೀಡಿತ್ತು. ಚಿಣ್ಣರು, 60 ವರ್ಷ ದಾಟಿದವರೂ ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ರಸ್ತೆಗಳ ಆಸುಪಾಸಿನಲ್ಲಿ ಸುಮಾರು 3 ಕಿ.ಮೀ ವ್ಯಾಪ್ತಿಯಲ್ಲಿ ಕಸ ಬಿದ್ದಿರುವ ಫೋಟೊಗಳನ್ನು ತೆಗೆದು ನಂತರ ಅವುಗಳನ್ನು ಸಂಗ್ರಹಿಸಿದರು. ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದ ಬಳಿ ನಿಗದಿಪಡಿಸಿದ್ದ ಸ್ಥಳಕ್ಕೆ ಕಸವನ್ನು ತಂದುಕೊಟ್ಟರು.

ಸ್ಪರ್ಧಿಗಳು ಗುರುತಿಸಿದ ಕಸದ ಭಾವಚಿತ್ರಗಳನ್ನು ಪರಿಗಣಿಸಿ, ರೋಹನ್, ನಿವೇದಿತಾ, ತನ್ವಿ ಹಾಗೂ ಸುಚಿತ್ ಎಂಬುವವರಿಗೆ ಬಹುಮಾನ ವಿತರಿಸಲಾಯಿತು.

ಗವಿಪುರದ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಭಕ್ತರ ಸಾಲು

ಹೊಸವರ್ಷ ಆಚರಣೆ ಮುಗಿದ ಬಳಿಕ ಬುಧವಾರ ಮುಂಜಾನೆ 3 ಗಂಟೆಗೆ ಪೌರಕಾರ್ಮಿಕರ ತಂಡವು 10 ಟನ್ ಕಸವನ್ನು (1 ಕಾಂಪ್ಯಾಕ್ಟರ್) ತೆರವುಗೊಳಿಸಿತ್ತು. ಹಾಗಾಗಿ, ಪೌರಕಾರ್ಮಿಕರ ತಂಡವನ್ನೂ ಅಭಿನಂದಿಸಿ, ಅವರಿಗೂ ಬಹುಮಾನ ವಿತರಿಸಲಾಯಿತು.

‘ಪೌರಕಾರ್ಮಿಕರು ಮುಂಜಾನೆಯೇ ಬಹುತೇಕ ಕಸವನ್ನು ತೆರವುಗೊಳಿಸಿದ್ದರಿಂದ ಈ ಪರಿಸರದಲ್ಲಿ ಎಲ್ಲೂ ಭಾರಿ ಪ್ರಮಾಣದಲ್ಲಿ ಕಸ ಕಂಡುಬಂದಿಲ್ಲ. ಕಸ ಸಂಗ್ರಹ ಮಾಡಿದ ಬಳಿಕ ಸಾರ್ವಜನಿಕರು ಬಿಸಾಡಿರುವ 8 ಕೆ.ಜಿ ಕಸವನ್ನು ಮಾತ್ರ ಸ್ಪರ್ಧಿಗಳು ಹುಡುಕಿದ್ದಾರೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಬಿಬಿಎಂಪಿ ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ.ರಂದೀಪ್, ‘ನಾಗರಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು, ಕಸದ ಡಬ್ಬಿಗಳಲ್ಲೇ ಹಾಕುವ ಮೂಲಕ ನಗರದ ಸ್ವಚ್ಛತೆಯನ್ನು ಕಾಪಾಡಬೇಕು’ ಎಂದು ಮನವಿ ಮಾಡಿದರು.

ಕಸ ಹೆಕ್ಕುವ ಸ್ಪರ್ಧೆಯಲ್ಲಿ ಭಾಗವಹಿಸಿದ ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡರು –ಪ್ರಜಾವಾಣಿ ಚಿತ್ರ

‘ಸ್ವಚ್ಛ ಸರ್ವೇಕ್ಷಣ್‌ ಅಭಿಯಾನಕ್ಕೆ ಕೈಜೋಡಿಸಿ’
‘ಜನರು ಮೂಲದಲ್ಲೇ ಹಸಿ ಮತ್ತು ಒಣ ಕಸ ವಿಂಗಡಣೆ ಮಾಡಬೇಕು. ಕಸ ಸಂಸ್ಕರಣೆ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಇದನ್ನು ಎಲ್ಲರೂ ಸರಿಯಾಗಿ ಪಾಲಿಸಿದರೆ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಾಗುತ್ತದೆ. ಈ ಅಭಿಯಾನದಲ್ಲಿ ನಗರದ ಸ್ಥಾನವನ್ನು ಸುಧಾರಿಸುವುದಕ್ಕೆ ನಾಗರಿಕರು ಸಹಕರಿಸಬೇಕು’ ಎಂದು ರಂದೀಪ್‌ ಕೋರಿದರು.

ಹೊಸ ವರ್ಷಕ್ಕೆ ನವ ಅತಿಥಿಗಳು
ಬೆಂಗಳೂರು:
ಹೊಸ ವರ್ಷದ ಮೊದಲ ದಿನವೇ ಮಗುವನ್ನು ಪಡೆಯಬೇಕು ಎಂಬ ಅನೇಕ ದಂಪತಿಯ ಕನಸು ಬುಧವಾರ ಸಾಕಾರವಾಗಿದೆ. ನಗರದ ಹಲವು ಹೆರಿಗೆ ಆಸ್ಪತ್ರೆಗಳಲ್ಲಿ ಹೊಸ ವರ್ಷದ ಮೊದಲ ದಿನ ನವಜಾತ ಶಿಶುಗಳ ಮೊದಲ ಅಳು ಕೇಳಿಸಿದೆ.
ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಬುಧವಾರ ರಾತ್ರಿವರೆಗೆ ವಾಣಿವಿಲಾಸ ಆಸ್ಪತ್ರೆಯೊಂದರಲ್ಲೇ 45 ಮಕ್ಕಳು ಜನಿಸಿವೆ.

ಇವುಗಳಲ್ಲಿ 15 ಸಿಸೇರಿಯನ್ ಮೂಲಕ ಜನಿಸಿದರೆ, ಉಳಿದವು ಸಹಜ ಹೆರಿಗೆಗಳು. ಹೊಸ ವರ್ಷದ ದಿನವೇ ಮಕ್ಕಳನ್ನು ಪಡೆದ ದಂಪತಿಗಳಿಗೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಶುಭ ಹಾರೈಸಿದರು.

‘ಸಿಸೇರಿಯನ್‌ ಹೆರಿಗೆಗಳನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಹೆರಿಗೆಯನ್ನು ಮುಂದಕ್ಕೆ ಹಾಕಲು ನಮ್ಮಲ್ಲಿ ಅವಕಾಶವಿಲ್ಲ’ ಎಂದು ಆಸ್ಪತ್ರೆಯ ಅಧೀಕ್ಷಕಿ ಡಾ.ಗೀತಾ ಶಿವಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.