ADVERTISEMENT

ಕೆ.ಆರ್‌. ಪುರ ಕೆರೆಗೆ ತ್ಯಾಜ್ಯ: ವರದಿ ಸಲ್ಲಿಕೆಗೆ ಸೂಚನೆ

ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ: ಎನ್‌ಜಿಟಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 20:08 IST
Last Updated 30 ನವೆಂಬರ್ 2022, 20:08 IST
.
.   

ಬೆಂಗಳೂರು: ಕೆ.ಆರ್‌. ಪುರ ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕಾರ್ಯಗಳ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತುಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯೂಎಸ್‌ಎಸ್‌ಬಿ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಚೆನ್ನೈ ಪೀಠ ಆದೇಶಿಸಿದೆ.

ಇದೇ ವರ್ಷ ಫೆ.7ರಂದು ಎನ್‌ಜಿಟಿಗೆ ವರದಿ ಸಲ್ಲಿಸಿದ್ದ ಜಲಮಂಡಳಿ, ಮಳೆಯಿಂದ ಸಂಗ್ರಹವಾಗಿರುವ ಕೆಸರು ತೆಗೆಯುವುದೂ ಸೇರಿ ಇತರ ಸಂರಕ್ಷಣೆ ನೆರವಾಗುವ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿತ್ತು.

ಆದರೆ, ಈ ಬಗ್ಗೆ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ಬಗ್ಗೆ ಅನುಪಾಲನಾ ವರದಿ ಸಲ್ಲಿಸಿಲ್ಲ ಎಂದು ಪೀಠವು ನೀಡಿರುವ ಆದೇಶದಲ್ಲಿ ತಿಳಿಸಿದೆ.

ADVERTISEMENT

ಇದೇ ರೀತಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹ ಫೆಬ್ರುವರಿ 22ರಂದು ಪ್ರಮಾಣಪತ್ರ ಸಲ್ಲಿಸಿತ್ತು. ಕೆರೆಗೆ ಒಳಚರಂಡಿ ನೀರು ಹರಿಯುತ್ತಿರುವುದು ಮತ್ತು ಘನತ್ಯಾಜ್ಯವನ್ನು ಕೆರೆ ಅಂಗಳದಲ್ಲಿ ಸುರಿಯುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ನೋಟಿಸ್‌ ನೀಡಿರುವುದಾಗಿ ತಿಳಿಸಿತ್ತು. ಜತೆಗೆ ನೀರಿನ ಗುಣಮಟ್ಟದ ಬಗ್ಗೆಯೂ ನಿಗಾವಹಿಸಲಾಗಿದೆ ಮತ್ತು ಮಾಲಿನ್ಯಕ್ಕೆ ಕಾರಣರಾಗಿರುವವರನ್ನು ಗುರುತಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಆದರೆ, ಇದುವರೆಗೆ ವರದಿ ಸಲ್ಲಿಸಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕೆ.ಆರ್‌. ಪುರ ಕೆರೆ ರಕ್ಷಣೆಗೆ ಒಂಬತ್ತು ಶಿಫಾರಸುಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಿತ್ತು. ಈ ಅಂಶಗಳ ಬಗ್ಗೆ ಕ್ರಮ ಕೈಗೊಂಡಿರುವ ಬಗ್ಗೆಯೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಪೀಠವು ತಿಳಿಸಿದೆ.

ಹೀಗಾಗಿ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಲಮಂಡಳಿ ಎರಡು ವಾರಗಳಲ್ಲಿ ಕೆರೆ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಗಳನ್ನು ಸಲ್ಲಿಸದಿದ್ದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳು ವಂತೆ ಆದೇಶ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ಮೊದಲು ಸಲ್ಲಿಸಿದ್ದ ವರದಿಯಲ್ಲಿನ ಶಿಫಾರಸುಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಬೇಕು ಎಂದು ತಾಕೀತು ಮಾಡಿದೆ.

ಮುಂದಿನ ವಿಚಾರಣೆಯ ಒಳಗೆ ಸಂಪೂರ್ಣ ವರದಿಗಳನ್ನು ಸಲ್ಲಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಮಂಡಳಿ ಮುಂದೆ ಹಾಜರಾಗುವಂತೆ ಸಮನ್ಸ್‌ ನೀಡಲಾಗುವುದು ಎಂದು ತಿಳಿಸಿದೆ.

ಸಾಮಾಜಿಕ ಕಾರ್ಯಕರ್ತ ಜೆ. ಜಗನ್‌ ಕುಮಾರ್‌ ಅವರು ಈ ಕುರಿತು ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.