ಬೆಂಗಳೂರು: ಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನವು ಸಿದ್ಧ ಉಡುಪು ಕಾರ್ಖಾನೆಗಳಲ್ಲಿ (ಗಾರ್ಮೆಂಟ್ಸ್) ಕೆಲಸ ಮಾಡುವವರಿಗೆ ಸಿಗುತ್ತಿಲ್ಲ. ತಿಂಗಳಿಗೆ ₹ 12,223 ಮಾತ್ರ ನೀಡಲಾಗುತ್ತಿದೆ. ಕನಿಷ್ಠ ₹ 25 ಸಾವಿರ ನೀಡಬೇಕು ಎಂದು ಗಾರ್ಮೆಂಟ್ಸ್ ಕಾರ್ಮಿಕರು ಒತ್ತಾಯಿಸಿದ್ದಾರೆ.
ಮುನ್ನಡೆ ಸಾಮಾಜಿಕ ಸಂಸ್ಥೆ, ಸಮೃದ್ಧಿ ಮತ್ತು ಸಾಧನ ಸಂಘಟನೆಗಳು ಭಾನುವಾರ ಹಮ್ಮಿಕೊಂಡಿದ್ದ ‘ದುಡಿ ಯುವ ಮಾನಿನಿಯರ ಮಹಾಸಂಗಮ’ ಕಾರ್ಯಕ್ರಮದಲ್ಲಿ ಬೇಡಿಕೆಗಳನ್ನು ಮಂಡಿಸಲಾಯಿತು.
‘ಕರ್ನಾಟಕ ಕಾರ್ಖಾನೆಗಳ(ತಿದ್ದುಪಡಿ) ಕಾಯ್ದೆ–2023’ ಕಾರ್ಮಿಕರ ಪರಿಸ್ಥಿತಿಯನ್ನು ಸುಧಾರಣೆ ಮಾಡುವ ಬದಲು ಜೀತದಾಳುಗಳನ್ನಾಗಿ ಮಾರ್ಪಡಿಸಿದೆ. ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಬೇಕು. ಎಂಟು ಗಂಟೆ ದುಡಿಮೆ ಮಾತ್ರ ಮಾಡಿಸಬೇಕು. ಗಾರ್ಮೆಂಟ್ ಕಾರ್ಮಿಕರಿಗೆ ಮತ್ತು ವಲಸೆ ಕಾರ್ಮಿಕರಿಗೆ ಬಿಪಿಎಲ್ ಪಡಿತರ ಚೀಟಿ ನೀಡಬೇಕು. ಕಾರ್ಮಿಕರಿಗೆ ಉಚಿತ ವಸತಿ ವ್ಯವಸ್ಥೆ ಮಾಡಿಕೊಡಬೇಕು. ಅಲ್ಲಿವರೆಗೆ ಮನೆ ಬಾಡಿಗೆ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.
ಕೆಲವೇ ಕಾರ್ಖಾನೆಗಳಲ್ಲಿ ಉಪಾಹಾರ ಗೃಹದ ವ್ಯವಸ್ಥೆ ಇದ್ದು, ಎಲ್ಲ 1,200 ಕಾರ್ಖಾನೆಗಳಲ್ಲಿಯೂ ಕ್ಯಾಂಟೀನ್ ವ್ಯವಸ್ಥೆ ಮಾಡಬೇಕು. ಕಾರ್ಮಿಕರ ಮಕ್ಕಳನ್ನು 6 ವರ್ಷದವರೆಗೆ ಪೊರೆಯಲು ಶಿಶುಪಾಲನಾ ಕೇಂದ್ರ ತೆರೆಯಬೇಕು. ಆಂತರಿಕ ಸಮಿತಿಯು ಕಾರ್ಖಾನೆ ಮಾಲೀಕರ ಪರವಾಗಿ ಇರುವುದರಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಲೈಂಗಿಕ ಕಿರುಕುಳಗಳು ಕಡಿಮೆಯಾಗಿಲ್ಲ. ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಿತಿ ಬಲಪಡಿಸಬೇಕು. ಕಾರ್ಮಿಕರ ಪರ ಪ್ರತಿನಿಧಿಗಳನ್ನೂ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹೆಚ್ಚುವರಿ ಕೆಲಸಕ್ಕೆ ಸಮನಾಗಿ ವೇತನ ನೀಡಲು ಸರ್ಕಾರ ಸೂಚಿಸಬೇಕು. ಕಾರ್ಮಿಕರಲ್ಲಿ ಶೇ 85ರಷ್ಟು ಮಹಿಳೆ ಯರೇ ಆಗಿರುವುದರಿಂದ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸಬೇಕು. ಸೇವಾವಧಿಗೆ ತಕ್ಕಂತೆ ಮುಂಬಡ್ತಿ, ವೇತನ ಹೆಚ್ಚಳ ಸೌಲಭ್ಯ ನೀಡಬೇಕು. ಕಾರ್ಮಿಕರ ಸಂಘ ರಚಿಸಿದರೆ ಬೆದರಿಸಲಾಗುತ್ತಿದೆ. ಗ್ರಾಚ್ಯುಯಿಟಿ ತಪ್ಪಿಸಲು ಕಾರ್ಖಾನೆಗಳನ್ನು ರಾತ್ರೋ ರಾತ್ರಿ ಮುಚ್ಚುತ್ತಾರೆ.
ಸರ್ಕಾರ ಆಗ ಕಾರ್ಮಿಕರ ಹಿತ ಕಾಪಾಡಬೇಕು ಎಂದು ಬೇಡಿಕೆಗಳನ್ನು ಮುಂದಿಟ್ಟರು.
ಸೆಂಟರ್ ಫಾರ್ ಲೇಬರ್ ಸ್ಟಡೀಸ್ ನಿರ್ದೇಶಕ ಬಾಬು ಮ್ಯಾಥ್ಯು, ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿ ರಾಗಿಣಿ, ಮುನ್ನಡೆ ಸಾಮಾಜಿಕ ಸಂಸ್ಥೆಯ ಅಧ್ಯಕ್ಷೆ ಇಶ್ರತ್ ನಿಸಾರ್, ಪ್ರಧಾನ ಕಾರ್ಯದರ್ಶಿ ಯಶೋದಾ ಪಿ.ಎಚ್., ಸಮೃದ್ಧಿ ಟ್ರಸ್ಟ್ ನಿರ್ದೇಶಕ ಬಿ. ಶಿವರಾಜೇಗೌಡ, ಸಾಧನ ಟ್ರಸ್ಟ್ ನಿರ್ದೇಶಕಿ ಕೆ. ಗಾಯತ್ರಿ, ಸಿಐಟಿಯು ಮುಖಂಡ ಪ್ರತಾಪ್ ಸಿಂಹ ಭಾಗವಹಿಸಿದ್ದರು.
ಸಚಿವರ ಗೈರು
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಹಾಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಮಿಕರ ಬೇಡಿಕೆಗಳ ಪತ್ರವನ್ನು ಸ್ವೀಕರಿಸಬೇಕಿತ್ತು. ಅವರು ಬಂದಿರಲಿಲ್ಲ. ದಿನ ನಿಗದಿ ಮಾಡಿ ಅವರ ಕಚೇರಿಗೆ ತೆರಳಿ ಬೇಡಿಕೆಗಳನ್ನು ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.