ADVERTISEMENT

ಗಾರ್ಮೆಂಟ್ಸ್: ತುಟ್ಟಿಭತ್ಯೆ ನೀಡಲು ಒಪ್ಪಿಗೆ

ಗಾರ್ಮೆಂಟ್ಸ್ ಆ್ಯಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್ ಹೋರಾಟಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 19:49 IST
Last Updated 4 ಫೆಬ್ರುವರಿ 2022, 19:49 IST

ಬೆಂಗಳೂರು: ‘ಗಾರ್ಮೆಂಟ್ಸ್‌ ಕಾರ್ಖಾನೆಗಳ 4 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಹೆಚ್ಚಳವಾಗಬೇಕಿದ್ದ ತುಟ್ಟಿಭತ್ಯೆ ನೀಡಲು ಕಾರ್ಖಾನೆಗಳ ಮಾಲೀಕರು ಒಪ್ಪಿಕೊಂಡಿದ್ದು, ಹೋರಾಟಕ್ಕೆ ಜಯ ದೊರೆತಿದೆ’ ಎಂದು ಗಾರ್ಮೆಂಟ್ಸ್ ಆ್ಯಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್ ತಿಳಿಸಿದೆ.

2020–21ರ ಗ್ರಾಹಕ ಸೂಚ್ಯಂಕದರ (ಸಿಪಿಐ) ಪರಿಷ್ಕರಣೆ ಪ್ರಕಾರ,ಗಾರ್ಮೆಂಟ್ಸ್ ಕಾರ್ಖಾನೆ ಕಾರ್ಮಿಕರ ತುಟ್ಟಿಭತ್ಯೆ(ಡಿ.ಎ) 2020ರ ಏಪ್ರಿಲ್‌ನಿಂದಲೇ ದಿನಕ್ಕೆ ₹16.06ರಂತೆ ಏರಿಕೆಯಾಗಬೇಕಿತ್ತು. ಕೋವಿಡ್ ಲಾಕ್‌ಡೌನ್ ಕಾರಣ ನೀಡಿ ತುಟ್ಟಿಭತ್ಯೆ ಏರಿಕೆ ಮುಂದೂಡುವಂತೆ ಕಾರ್ಖಾನೆಗಳ ಮಾಲೀಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ, 2020ರ ಜುಲೈ 7ರಂದು ಆದೇಶ ಹೊರಡಿಸಿದ ಸರ್ಕಾರ, 2021ರ ಮಾ.31ರವರೆಗೆ ತುಟ್ಟಿಭತ್ಯೆ ಏರಿಕೆಯನ್ನೂ ಮುಂದೂಡಿತ್ತು.ಇದನ್ನು ಪ್ರಶ್ನಿಸಿ ಕಾರ್ಮಿಕ ಸಂಘಟನೆಗಳು ಹೈಕೋರ್ಟ್‌ ಮೆಟ್ಟಿಲೇರಿದ್ದವು.ಸರ್ಕಾರದ ಆದೇಶಕ್ಕೆ 2020ರ ಸೆ.11ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

‘ಆದರೂ, ಹೆಚ್ಚುವರಿ ತುಟ್ಟಿಭತ್ಯೆ ಪಾವತಿಸದೆ ₹350 ಕೋಟಿ ಹಿಂಬಾಕಿಯನ್ನು ಕಾರ್ಖಾನೆಗಳು ಉಳಿಸಿಕೊಂಡಿದ್ದವು. ಸರ್ಕಾರದ ಮೇಲೆ ಒತ್ತಡ ಹೇರಲು ನಡೆಸಿದ ಹೋರಾಟಗಳಿಗೆ ಕಾರ್ಖಾನೆಗಳ ಮಾಲೀಕರು ಜಗ್ಗಿರಲಿಲ್ಲ. ಬಳಿಕ ಅಂತರರಾಷ್ಟ್ರೀಯ ಸಂಘಟನೆಗಳ ಜತೆಗೂಡಿ ಆಂದೋಲನ ಸಂಘಟಿಸಲಾಯಿತು. ಸಿದ್ಧ ಉಡುಪು ಬ್ರ್ಯಾಂಡ್‌ ಕಂಪನಿಗಳಿಗೆ ಪತ್ರ ಬರೆದು ಒತ್ತಡ ಹೇರಲಾಯಿತು’ ಎಂದು ಯೂನಿಯನ್‌ನ ಸಲಹೆಗಾರ ಕೆ.ಆರ್‌. ಜಯರಾಂ ಹೇಳಿದ್ದಾರೆ.

ADVERTISEMENT

‘ಪರಿಣಾಮವಾಗಿ 2020 ಏಪ್ರಿಲ್‍ನಿಂದತಿಂಗಳಿಗೆ ₹417 ನಂತೆ ಜಾರಿಗೊಳಿಸಬೇಕಿದ್ದ ಮೊತ್ತವನ್ನು 2022ರ ಫೆಬ್ರುವರಿ ವೇತನದಲ್ಲಿ ಸೇರಿಸಲು ಮಾಲೀಕರು ಒಪ್ಪಿಕೊಂಡಿದ್ದಾರೆ’ ಎಂದು ವಿವರಿಸಿದ್ದಾರೆ.

‘ತುಟ್ಟಿಭತ್ಯೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ‘ಪ್ರಜಾವಾಣಿ’ಯು 2021ರಅಕ್ಟೋಬರ್ 7ರಂದು ವರದಿ ಪ್ರಕಟಿಸಿತ್ತು. 8ರಂದು ಇದೇ ವಿಷಯದ ಮೇಲೆ ಸಂಪಾದಕೀಯವನ್ನೂ ಬರೆದಿತ್ತು. ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಲು ಇವು ಮಹತ್ವದ ಪಾತ್ರ ವಹಿಸಿದವು’ ಎಂದು ಅವರು ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.