ADVERTISEMENT

ರಿಫಿಲ್ಲಿಂಗ್: ಗೃಹ ಬಳಕೆ ಅನಿಲ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ಪತ್ತೆ

* ಮಾರುಕಟ್ಟೆಯಲ್ಲಿ ಸಿಲಿಂಡರ್ ಅಭಾವ ಸೃಷ್ಟಿ * ನಿಗದಿತ ದಿನದಂದು ಸಿಗದ ಗ್ಯಾಸ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 23:39 IST
Last Updated 17 ಜುಲೈ 2023, 23:39 IST
ಗೃಹ ಬಳಕೆ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌
ಗೃಹ ಬಳಕೆ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌   

ಬೆಂಗಳೂರು: ಗ್ರಾಹಕರ ಮನೆಗಳಿಗೆ ತಲುಪಬೇಕಿದ್ದ ಗೃಹ ಬಳಕೆ ಅನಿಲ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರುತ್ತಿರುವ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ.

ಇಂಡೇನ್, ಭಾರತ್, ಎಚ್‌.ಪಿ, ಗೋಗ್ಯಾಸ್ ಹಾಗೂ ಇತರೆ ಕಂಪನಿಗಳ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿರುವುದು ಸಿಸಿಬಿ ತನಿಖೆಯಿಂದ ಪತ್ತೆಯಾಗಿದೆ. ಆರೋಪಿಗಳ ಕೃತ್ಯದಿಂದಾಗಿ ಮಾರುಕಟ್ಟೆಯಲ್ಲಿ ಸಿಲಿಂಡರ್ ಅಭಾವ ಸೃಷ್ಟಿಯಾಗುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಿಫಿಲ್ಲಿಂಗ್ ದಂಧೆಯಲ್ಲಿ ತೊಡಗಿದ್ದ ಬಿಟಿಎಂ ಎರಡನೇ ಹಂತದ ನಿವಾಸಿ ಎಂ.ಸುಮಂತ್ (32), ದೀಪಕ್ (30), ರಾಜು (21), ಪ್ರಕಾಶ್ (21) ಹಾಗೂ ರಿತಿಕ್ (19) ಅವರನ್ನು ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇವರಿಂದ ₹ 35 ಲಕ್ಷ ಮೌಲ್ಯದ 694 ಸಿಲಿಂಡರ್ ಹಾಗೂ 75 ರಿಫಿಲ್ಲಿಂಗ್ ರಾಡ್‌ಗಳನ್ನು ಜಪ್ತಿ ಮಾಡಿದ್ದರು. ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲೂ ರಿಫಿಲ್ಲಿಂಗ್ ದಂಧೆ ನಡೆಸಿ ಇಬ್ಬರು ಸಿಕ್ಕಿಬಿದ್ದಿದ್ದಾರೆ.

ADVERTISEMENT

‘ಗ್ರಾಹಕರು ಕಾಯ್ದಿರಿಸುವ ಸಿಲಿಂಡರ್‌ಗಳನ್ನು ಏಜೆನ್ಸಿ ಸಿಬ್ಬಂದಿಯೇ ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ನಿಗದಿತ ಸಮಯಕ್ಕೆ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ ಸಿಗುತ್ತಿಲ್ಲ. ನಗರ ಹಾಗೂ ರಾಜ್ಯದ ಇತರೆಡೆ ಈ ಜಾಲ ವ್ಯಾಪಿಸಿರುವುದು ಕಂಡುಬರುತ್ತಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ಎರಡು ಏಜೆನ್ಸಿ ಮೇಲೆ ದಾಳಿ: ಗೃಹ ಬಳಕೆ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಸಣ್ಣ ಸಿಲಿಂಡರ್‌ಗಳಿಗೆ ರಿಫಿಲ್ಲಿಂಗ್ ಮಾಡುತ್ತಿದ್ದ ಎರಡು ಏಜೆನ್ಸಿಗಳ ಮೇಲೆ ಪ್ರತ್ಯೇಕ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಹಾಗೂ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಏಜೆನ್ಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

‘ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯ ಸಿ.ಕೆ. ನಗರದಲ್ಲಿರುವ ಎಸ್‌.ಎಲ್‌.ಆರ್ ಎಂಟರ್‌ಪ್ರೈಸಸ್ ಹಾಗೂ ವೆಂಕಟೇಶ್ವರ್ ಗ್ಯಾಸ್ ಏಜೆನ್ಸಿ ಮೇಲೆ ಇತ್ತೀಚೆಗೆ ದಾಳಿ ಮಾಡಲಾಗಿತ್ತು. ಎರಡೂ ಕಡೆ ಗೃಹ ಬಳಕೆ ಸಿಲಿಂಡರ್‌ಗಳು ಪತ್ತೆಯಾಗಿವೆ’ ಎಂದು ಪೊಲೀಸರು ಹೇಳಿದರು.

‘ಏಜೆನ್ಸಿಗಳ ಮಾಲೀಕರಾದ ರಘು ಹಾಗೂ ಮಲ್ಲಿಕಾರ್ಜುನ್ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಅವರಿಬ್ಬರು ಇದುವರೆಗೂ ಎಷ್ಟು ಸಿಲಿಂಡರ್ ಬಳಕೆ ಮಾಡಿದ್ದರು. ಯಾವೆಲ್ಲ ಏಜೆನ್ಸಿಗಳ ಜೊತೆ ಒಡನಾಟ ಹೊಂದಿ ಕೃತ್ಯ ಎಸಗುತ್ತಿದ್ದರು ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ಸಾರ್ವಜನಿಕರ ಜೀವಕ್ಕೆ ಕುತ್ತು: ‘ಆರೋಪಿಗಳು, ಗ್ಯಾಸ್ ರಿಫಿಲ್ಲಿಂಗ್ ಮಾಡಲು ಯಾವುದೇ ಅನುಮತಿ ಪಡೆದಿರಲಿಲ್ಲ. ಇವರ ಕೃತ್ಯದಿಂದ ಸಾರ್ವಜನಿಕರ ಜೀವಕ್ಕೆ ಕುತ್ತು ಉಂಟಾಗುವ ಹಾಗೂ ಆಸ್ತಿಗೆ ಹಾನಿಯಾಗುವ ಸಾಧ್ಯತೆ ಇತ್ತು. ರಿಫಿಲ್ಲಿಂಗ್ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಲಾಗಿತ್ತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.