ಬೆಂಗಳೂರು:ತಾಪಮಾನ ಏರಿಕೆಯಿಂದ ನಗರದಲ್ಲಿ ಉದರಬೇನೆ (ಗ್ಯಾಸ್ಟ್ರೋಎಂಟರೈಟಿಸ್) ಸಮಸ್ಯೆ ಹೆಚ್ಚಾಗಲಾರಂಭಿಸಿದೆ. ವಾತಾವರಣದಲ್ಲಿನ ದೂಳು ಮತ್ತು ಶುಷ್ಕತೆಯಿಂದ ಚರ್ಮದ ಅಲರ್ಜಿ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳ ಸಂಬಂಧ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಏರಿಕೆ ಕಂಡಿದೆ.
ಬಿಸಿಲ ಧಗೆ ದಿನದಿಂದ ದಿನಕ್ಕೆ ಏರತೊಡಗಿದೆ. ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ವರೆಗೂ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಇನ್ನೊಂದೆಡೆವಾಹನ ಸಂಚಾರ ದಟ್ಟಣೆಯಿಂದಾಗಿ ವಾತಾವರಣದ ಗುಣಮಟ್ಟ ದಿನೇ ದಿನೇ ಕುಸಿತ ಕಾಣುತ್ತಿದೆ. ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ) ‘ಉತ್ತಮ’ ಹಂತದಿಂದ ‘ಮಧ್ಯಮ’ ಹಂತಕ್ಕೆ ತಲುಪಿದೆ. ಅಧಿಕ ತಾಪಮಾನ ಹಾಗೂ ದೂಳಿನಿಂದಾಗಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಈ ವರ್ಷ ಫೆಬ್ರುವರಿ ಅಂತ್ಯಕ್ಕೆ ರಾಜ್ಯದಲ್ಲಿ 18,659ಉದರಬೇನೆ (ಗ್ಯಾಸ್ಟ್ರೋಎಂಟರೈಟಿಸ್) ಪ್ರಕರಣಗಳು ವರದಿಯಾಗಿದ್ದವು. ಅರ್ಧಕ್ಕೂ ಅಧಿಕ (11,873) ಪ್ರಕರಣಗಳು ಬೆಂಗಳೂರು ವಲಯದಲ್ಲಿಯೇ ದೃಢಪಟ್ಟಿವೆ. ‘ಈ ಸಂಖ್ಯೆ ಮಾರ್ಚ್ ತಿಂಗಳಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
‘ಉದರಬೇನೆ ಸಮಸ್ಯೆಗೆಹೊರ ರೋಗಿಗಳ ವಿಭಾಗಕ್ಕೆ ಪ್ರತಿ ದಿನ 15–20 ರೋಗಿಗಳು ಬರುತ್ತಿದ್ದಾರೆ. ಶುಚಿ ಇಲ್ಲದ ಆಹಾರ ಮತ್ತು ನೀರು ಸೇವನೆಯಿಂದ ಈ ಸಮಸ್ಯೆ ಉಂಟಾಗುತ್ತಿದೆ’ ಎಂದು ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.
ವಿಕ್ಟೋರಿಯಾ, ಜಯನಗರ ಸಾರ್ವಜನಿಕ ಆಸ್ಪತ್ರೆ, ಕಿಮ್ಸ್, ಮಣಿಪಾಲ್, ಫೋರ್ಟಿಸ್, ಅಪೋಲೊ, ನಾರಾಯಣ ಹೆಲ್ತ್ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ ಹೊರ ರೋಗಿಗಳಲ್ಲಿ ಶೇ 10 ಹಾಗೂ ಅದಕ್ಕಿಂತ ಅಧಿಕ ರೋಗಿಗಳುಉದರಬೇನೆ, ಕಾಲರಾ, ಬೆವರು ಗುಳ್ಳೆಯಂತಹ ಸಮಸ್ಯೆಗಳಿಗೆ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು ವಲಯದಲ್ಲಿ ಈ ವರ್ಷ ಎರಡು ತಿಂಗಳಲ್ಲಿಯೇ 2,463ಟೈಫಾಯ್ಡ್ಪ್ರಕರಣಗಳು ದೃಢಪಟ್ಟಿವೆ.
‘ಬೇಸಿಗೆಯಲ್ಲಿ ನೀರಿನಿಂದಲೇ ಹೆಚ್ಚು ರೋಗಗಳು ಹರಡುತ್ತವೆ. ಹೀಗಾಗಿ, ಶುದ್ಧ ನೀರು ಕುಡಿಯುವುದು ಬಹಳ ಮುಖ್ಯ. ರಸ್ತೆ ಬದಿಯಲ್ಲಿ ತೆರೆದಿಟ್ಟ ಆಹಾರ ಪದಾರ್ಥ ಹಾಗೂ ಕತ್ತರಿಸಿದ ಹಣ್ಣುಗಳನ್ನು ತಿನ್ನುವುದರಿಂದ ರೋಗಾಣುಗಳು ಹರಡಿ, ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತದೆ’ ಎಂದು ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಡಾ.ಬಿ.ಆರ್. ವೆಂಕಟೇಶಯ್ಯ ತಿಳಿಸಿದರು.
ವೈದ್ಯರು ನೀಡಿದ ಪ್ರಮುಖ ಸಲಹೆಗಳು
* ರಸ್ತೆ ಬದಿಯಆಹಾರ ಸುರಕ್ಷಿತವಲ್ಲ
* ದ್ರವ ರೂಪದ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು
* ಕಾಯಿಸಿ, ಆರಿಸಿದ ಶುದ್ಧ ನೀರನ್ನು ಕುಡಿಯಬೇಕು
* ಆಹಾರ ಸೇವಿಸುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು
* ತಾಜಾ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು
* ಹತ್ತಿಯ ಬಟ್ಟೆಯನ್ನು ಧರಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.