ಬೆಂಗಳೂರು: ‘2023ರ ವೇಳೆಗೆ ಭಾರತವನ್ನು ಸಂಪೂರ್ಣ ಹಿಂದೂರಾಷ್ಟ್ರ ಮಾಡಬೇಕೆಂದು ಪಣ ತೊಟ್ಟಿದ್ದೆವು. ಅದಕ್ಕೆ ಅಡ್ಡಪಡಿಸುವ ಧಾಟಿಯಲ್ಲಿ ಮಾತನಾಡುತ್ತಿದ್ದ ಎಲ್ಲರನ್ನೂ ಮುಗಿಸಲು ನಿರ್ಧರಿಸಿದ್ದೆವು...’
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ಪೊಲೀಸರು ಬಂಧಿಸಿರುವ ಮಹಾರಾಷ್ಟ್ರದ ವಾಸುದೇವ್ ಸೂರ್ಯವಂಶಿ ಅಲಿಯಾಸ್ ಮೆಕ್ಯಾನಿಕ್, ವಿಚಾರಣೆ ವೇಳೆ ಈ ರೀತಿ ಹೇಳಿಕೆ ಕೊಟ್ಟಿದ್ದಾನೆ.
ಆತನ ಈ ಹೇಳಿಕೆಯನ್ನು ಗುರುವಾರ ನ್ಯಾಯಾಧೀಶರ ಗಮನಕ್ಕೆ ತಂದ ಎಸ್‌ಐಟಿ ಪರ ವಕೀಲರು, ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದರು. ಮನವಿ ಪುರಸ್ಕರಿಸಿದ ನ್ಯಾಯಾಲಯ, ವಾಸುದೇವ್‌ನನ್ನು 15 ದಿನ ಎಸ್‌ಐಟಿ ಸುಪರ್ದಿಗೆ ಒಪ್ಪಿಸಿದೆ.
ಬೈಕ್ ಕೊಟ್ಟಿದ್ದ: ‘ಗೌರಿ ಹತ್ಯೆಗೆ ಬಳಸಿದ್ದ ಬೈಕ್ ಶರದ್ ಕಳಾಸ್ಕರ್ ಬಳಿ ಪತ್ತೆಯಾಗಿದೆ. ಆದರೆ, ಆತ ಅದರ ಮಾಲೀಕನಲ್ಲ. ಈ ನಿಟ್ಟಿನಲ್ಲಿ ಶರದ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ‘ಗ್ಯಾರೇಜ್ ಮೆಕ್ಯಾನಿಕ್ ಒಬ್ಬ ನಮಗೆ ಆ ಬೈಕ್ ಕೊಟ್ಟಿದ್ದ. ಆತನ ಹೆಸರು ಗೊತ್ತಿಲ್ಲ’ ಎಂದು ಹೇಳಿದ್ದ. ಅಮೋಲ್ ಕಾಳೆ ಬಳಿ ಸಿಕ್ಕಿದ್ದ ಡೈರಿಯಲ್ಲೂ ‘ಮೆಕ್ಯಾನಿಕ್’ ಎಂಬ ಕೋಡ್‌ವರ್ಡ್ ಇತ್ತು. ಹೀಗಾಗಿ, ಆ ವ್ಯಕ್ತಿಯ ಶೋಧ ಕಾರ್ಯದಲ್ಲಿ ತೊಡಗಿದ್ದೆವು’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ ಸಂಬಂಧ ಇತ್ತೀಚೆಗೆ ವಾಸುದೇವ್‌ನನ್ನು ಬಂಧಿಸಿದ ಸಿಬಿಐ, ‘ಈ ಆರೋಪಿ ಕುಖ್ಯಾತ ಬೈಕ್ ಕಳ್ಳನಾಗಿದ್ದು, ಹಂತಕರಿಗೆ ಈತನೇ ಬೈಕ್ ಪೂರೈಸಿದ್ದ’ ಎಂದು ನ್ಯಾಯಾಲಯಕ್ಕೆ ವರದಿ ಕೊಟ್ಟಿತ್ತು. ಬಾಡಿ ವಾರಂಟ್ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಗೌರಿ ಹಂತಕರಿಗೂ ತಾನೇ ಬೈಕ್ ಕೊಟ್ಟಿದ್ದಾಗಿ ಒಪ್ಪಿಕೊಂಡ. ಹೀಗಾಗಿ, 17ನೇ ಆರೋಪಿಯನ್ನಾಗಿ ಮಾಡಿ ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದರು.
‘ನಾನು ಎಂಟು ವರ್ಷಗಳಿಂದ ಮಹಾರಾಷ್ಟ್ರದ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದು, ಹಿಂದೂ ಧರ್ಮದ ರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದೆ. ನಂತರ ಆ ಸಂಘಟನೆ ತೊರೆದು ಬೈಕ್ ಕಳ್ಳತನ ಪ್ರಾರಂಭಿಸಿದೆ. 2023ರ ವೇಳೆಗೆ ಹಿಂದೂರಾಷ್ಟ್ರ ಕಟ್ಟುವ ಆಶಯವಿತ್ತು’ ಎಂದೂ ವಾಸುದೇವ್ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ನಿವೃತ್ತ ನ್ಯಾಯಾಧೀಶರ ಹತ್ಯೆಗೂ ಸಂಚು!
‘ಮಹಾರಾಷ್ಟ್ರದ ನಿವೃತ್ತ ನ್ಯಾಯಾಧೀಶರ ಹತ್ಯೆಗೂ ಸಂಚು ರೂಪಿಸಿದ್ದ ಹಂತಕರು, ಅವರ ಮನೆ ಬಳಿ ತಿರುಗಾಡಿ ಚಲನವಲನಗಳನ್ನು ಗಮನಿಸಿದ್ದರು. ನಿಗಾ ಇಡುವ ಕೆಲಸವನ್ನು ವಾಸುದೇವ್‌ಗೇ ವಹಿಸಲಾಗಿತ್ತು. ಅದೇ ರೀತಿ ಗೋವಿಂದ ಪಾನ್ಸರೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಅಧಿಕಾರಿಯೊಬ್ಬರ ಹೆಸರೂ ಇವರ ಹಿಟ್‌ಲಿಸ್ಟ್‌ನಲ್ಲಿತ್ತು’ ಎಂದು ಸಿಬಿಐ, ಅಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.