ಬೆಂಗಳೂರು: ‘ಟಿ.ವಿ ಸಂಗೀತ ಸ್ಪರ್ಧೆಗಳಿಂದ ಮಕ್ಕಳ ಪ್ರತಿಭೆ ಮೊಟಕುಗೊಳ್ಳಲಿದೆ. ಇದರಿಂದಾಗಿ ಉದಯೋನ್ಮುಖ ಅಸಂಖ್ಯಾತ ಕಲಾಕುಸುಮಗಳು ಬಾಡುತ್ತಿವೆ’ ಎಂದು ಕಲಾವಿದೆ ವಿದುಷಿ ಸುಕನ್ಯಾ ಪ್ರಭಾಕರ್ ಅಭಿಮತ ವ್ಯಕ್ತಪಡಿಸಿದರು.
ಬೆಂಗಳೂರು ಗಾಯನ ಸಮಾಜ ನಗರದಲ್ಲಿ ಆಯೋಜಿಸಿರುವ 8 ದಿನಗಳ ಸುವರ್ಣ ಮಹೋತ್ಸವ ಸಂಗೀತ ಸಮ್ಮೇಳನಕ್ಕೆ ಭಾನುವಾರ ಚಾಲನೆ ದೊರೆಯಿತು. ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದ ಸುಕನ್ಯಾ ಪ್ರಭಾಕರ್, ‘ಇಂದಿನ ಮಕ್ಕಳಲ್ಲಿ ದೈತ್ಯ ಪ್ರತಿಭೆಯಿದೆ. ಆದರೆ, ದೂರದರ್ಶನಗಳಲ್ಲಿ ನಡೆಯುವ ಸ್ಪರ್ಧೆಗಳು ಪ್ರತಿಭೆಗಳನ್ನು ಚಿವುಟಿ ಹಾಕುತ್ತಿವೆ. ಅಷ್ಟೇ ಅಲ್ಲ, ಹಣದ ಆಮಿಷ ತೋರಿಸುವ ಮೂಲಕ ದಿಕ್ಕು ತಪ್ಪಿಸುತ್ತಿವೆ. ಹಾಗಾಗಿ, ಪೋಷಕರು ಹಾಗೂ ಗುರುಗಳು ಎಚ್ಚರಿಕೆಯಿಂದ ಶಾಸ್ತ್ರೀಯ ಸಂಗೀತದೆಡೆಗೆ ಮಕ್ಕಳನ್ನು ಕರೆತರಬೇಕು’ ಎಂದು ತಿಳಿಸಿದರು.
‘ಕಲೆ ನಿಂತ ನೀರಾಗಬಾರದು. ಶಾಸ್ತ್ರದ ಚೌಕಟ್ಟಿನ ನೆಲೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯಬೇಕು. ಈ ದಿಸೆಯಲ್ಲಿ ಕಲಾವಿದರೆಲ್ಲ ಎಲ್ಲರೊಳಗೊಂದಾಗುವ ಕಲೆಯನ್ನು ಮೈಗೂಡಿಸಿಕೊಂಡು, ಸಾಗಬೇಕಿದೆ. ಯುವ ಪೀಳಿಗೆಯ ಕೈಯಲ್ಲಿ ಸಂಗೀತದ ಭವಿಷ್ಯ ಭದ್ರವಾಗಿದೆ. ಇದಕ್ಕೆ ಪೂರಕವಾಗಿ ಅವಕಾಶಗಳು ಹಾಗೂ ವೇದಿಕೆಗಳು ಹೇರಳವಾಗಿವೆ’ ಎಂದರು.
ಮೇಲುಕೋಟೆಯ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್, ‘ವಿದ್ಯೆ ನಮ್ಮ ಅಲೌಕಿಕ ಬದುಕಿಗೆ ಆಶ್ರಯ ನೀಡುತ್ತದೆ. ಸಂಗೀತ ಪರಂಪರೆ ಇರುವ ಸ್ಥಳ ವಿದ್ಯಾಸ್ಥಾನವಾಗಲಿದೆ. ಅಷ್ಟೇ ಅಲ್ಲ, ಸಮಾಜದಲ್ಲಿ ಉತ್ತಮ ವಾತಾವರಣ ಸಹ ನಿರ್ಮಾಣವಾಗುತ್ತದೆ. ಸಂಗೀತ ಸಂತೋಷವನ್ನು ಹಂಚಲು ಸಿದ್ಧವಾದ ಸಾಧನ’ ಎಂದು ಹೇಳಿದರು.
‘ದೇವರ ಜಪ, ಧಾರ್ಮಿಕ ಅನುಷ್ಠಾನಗಳು ಸಂಗೀತದಲ್ಲಿದೆ. ಸಮಾಜ ಆನಂದಮಯದಿಂದ ಕೂಡಿರಲು ಸಂಗೀತ ಚಿಂತನೆ ಬೆಳೆಯಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.