ADVERTISEMENT

ಗೆಜೆಟೆಡ್ ‍ಪ್ರೊಬೇಷನರಿ: ವಯೋಮಿತಿ ಸಡಿಲಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 16:33 IST
Last Updated 17 ಜೂನ್ 2024, 16:33 IST
ವಿ. ಲೋಕೇಶ್
ವಿ. ಲೋಕೇಶ್   

ಬೆಂಗಳೂರು: 2017ರಲ್ಲಿ ಕೆಎಎಸ್‌ ನೇಮಕಾತಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಪರಿಗಣಿಸದೆ ಪ್ರಸಕ್ತ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕಡತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರೂ, ಅವಕಾಶ ಕಲ್ಪಿಸಲು ಕೆಪಿಎಸ್‌ಸಿ ಮತ್ತು ಡಿಪಿಎಆರ್‌ ಮುಂದಾಗಿಲ್ಲ ಎಂದು ಹುದ್ದೆ ಆಕಾಂಕ್ಷಿಗಳು ದೂರಿದ್ದಾರೆ.

‘ಪ್ರಸಕ್ತ ಸಾಲಿನ ನೇಮಕಾತಿಗೆ ಜುಲೈ 21ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ನಿರ್ಧರಿಸಿದೆ. 2017ರಲ್ಲಿ ಕೆಎಎಸ್‌ ಪರೀಕ್ಷೆ ಬರೆದವರಿಗೆ ವಯೋಮಿತಿ ಪರಿಗಣಿಸದೆ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಪರಿಗಣಿಸಿದರೆ, ಪೂರ್ವಭಾವಿ ಪರೀಕ್ಷೆಯನ್ನು ಕನಿಷ್ಠ ಮೂರು ತಿಂಗಳು ಮುಂದೂಡಬೇಕಾಗುತ್ತದೆ ಎಂದು ಕೆಪಿಎಸ್‌ಸಿ ಹೇಳುತ್ತಿದೆ. ಇದೇ ಕಾರಣಕ್ಕೆ ಆದೇಶ ಹೊರಡಿಸಲು ಡಿಪಿಎಆರ್‌ ಹಿಂದೇಟು ಹಾಕುತ್ತಿದೆ‌’ ಎಂದು ಕರ್ನಾಟಕ ರಾಜ್ಯ ದಲಿತ ಪದವೀಧರ ಸಂಘದ ಅಧ್ಯಕ್ಷ ವಿ. ಲೋಕೇಶ ಆರೋಪಿಸಿದ್ದಾರೆ.

ಅಭ್ಯರ್ಥಿಗಳ ಬೇಡಿಕೆಗೆ ಸ್ಪಂದಿಸಿದ್ದ ಮುಖ್ಯಮಂತ್ರಿ, ಸಚಿವ ಸಂಪುಟ ಸಭೆಯ ಘಟನೋತ್ತರ ಅನುಮೋದನೆ ಬಾಕಿ ಇಟ್ಟು ಆದೇಶ ಹೊರಡಿಸುವಂತೆ ಡಿಪಿಎಆರ್‌ ಕಾರ್ಯದರ್ಶಿಗೆ ಮಾರ್ಚ್‌ ತಿಂಗಳಿನಲ್ಲೇ ಸೂಚನೆ ನೀಡಿದ್ದರು. ಆದರೆ, ಲೋಕಸಭೆ ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ಡಿಪಿಎಆರ್‌ ಆದೇಶ ಹೊರಡಿಸಿರಲಿಲ್ಲ.

ADVERTISEMENT

‘ಕೆಪಿಎಸ್‌ಸಿ ಮತ್ತು ಡಿಪಿಎಆರ್‌ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ನಮ್ಮ ಬೇಡಿಕೆ ಮುಂದಿಟ್ಟಿದ್ದೇವೆ. ಆದೇಶ ಹೊರಡಿಸಲು ವಿಳಂಬ ಮಾಡುತ್ತಿರುವುದರಿಂದ, ಕಳೆದ 4– 5 ವರ್ಷಗಳಿಂದ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿರುವ 50 ಸಾವಿರಲ್ಲೂ ಹೆಚ್ಚು ಅಭ್ಯರ್ಥಿಗಳಲ್ಲಿ ಆತಂಕ ಉಂಟಾಗಿದೆ’ ಎಂದಿದ್ದಾರೆ.  

‘ಜುಲೈ 21ಕ್ಕೆ ನಿಗದಿಯಾಗಿರುವ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ನಾವು ಬೇಡಿಕೆ ಇಟ್ಟಿಲ್ಲ. ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ, ಅರ್ಜಿ ಸಲ್ಲಿಸಲು ಒಂದು ವಾರ ಕಾಲ ಅವಕಾಶ ಕೊಡಿ ಎನ್ನುವುದಷ್ಟೆ ನಮ್ಮ ಬೇಡಿಕೆ. ಕಳೆದ ಐದು ಸಾಲುಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕೆಪಿಎಸ್‌ಸಿ ತಲಾ 2 ವರ್ಷ ತೆಗೆದುಕೊಂಡಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಮುಂಬರುವ ಡಿಸೆಂಬರ್‌ನಲ್ಲಿಯೇ ಫಲಿತಾಂಶ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳುತ್ತಿದೆ. ಆ ಮೂಲಕ, ಗರಿಷ್ಠ ವಯೋಮಿತಿ ಸಡಿಲಿಸಿ ಒಂದು ಬಾರಿ ಮಾತ್ರ ಅವಕಾಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳನ್ನು ಅವಕಾಶ ವಂಚಿತರನ್ನಾಗಿ ಮಾಡಲು ಕೆಪಿಎಸ್‌ಸಿ ಮುಂದಾಗಿದೆ’ ಎಂದು ಆರೋಪಿಸಿದ್ದಾರೆ.

ಪ್ರತಿಕ್ರಿಯೆ ಪಡೆಯಲು ಡಿಪಿಎಆರ್‌ ಕಾರ್ಯದರ್ಶಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಕೆಪಿಎಸ್‌ಸಿಯ ಅಭಿಪ್ರಾಯದ ಜೊತೆ ಡಿಪಿಎಆರ್‌ ಮತ್ತೊಮ್ಮೆ ಮುಖ್ಯಮಂತ್ರಿಗೆ ಕಡತ ಮಂಡಿಸಿರುವ ಮಾಹಿತಿಯಿದೆ. 50 ಸಾವಿರ ಅಭ್ಯರ್ಥಿಗಳ ಪರ ಮುಖ್ಯಮಂತ್ರಿ ನಿಲ್ಲುವ ವಿಶ್ವಾಸವಿದೆ.
ವಿ. ಲೋಕೇಶ್‌, ಅಧ್ಯಕ್ಷ, ರಾಜ್ಯ ದಲಿತ ಪದವೀಧರರ ಸಂಘ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.