ಆಲೂರು: ವಾಟೆಹೊಳೆ ಜಲಾಶಯ ಸಮೀಪದಲ್ಲಿರುವ ಚನ್ನಹಳ್ಳಿ ಗ್ರಾಮದಲ್ಲಿ ಸೋಮವಾರ ಆಟವಾಡುವ ಸಂದರ್ಭದಲ್ಲಿ ಸಿಕ್ಕಿದ ಜಿಲೆಟಿನ್ ಕಡ್ಡಿಯನ್ನು ಕಲ್ಲಿನಿಂದ ಜಜ್ಜುವಾಗ ಸ್ಫೋಟಗೊಂಡು, ಇಬ್ಬರು ಮಕ್ಕಳು ಗಾಯ ಗೊಂಡಿದ್ದಾರೆ.
ಗ್ರಾಮದ ರಘು ಅವರ ಪುತ್ರ ಅಭಿಷೇಕ್ (12) ಹಾಗೂ ರಂಗಸ್ವಾಮಿ ಅವರ ಪುತ್ರಿ ಕೃತಿಕಾ (8) ಗಾಯಗೊಂಡವರು. ಇಬ್ಬರ ಮುಖದಲ್ಲಿ ಗಾಯಗಳಾಗಿವೆ. ಸ್ಥಳೀಯರು ಇಬ್ಬರನ್ನೂ ಹಾಸನದ ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಎತ್ತಿನಹೊಳೆ ಯೋಜನೆಯ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು, ಎರಡು ವರ್ಷಗಳ ಹಿಂದೆ ಚನ್ನಹಳ್ಳಿ ಗ್ರಾಮದಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ವಾಸವಾಗಿದ್ದರು. ಕಲ್ಲು ಸ್ಫೋಟಿಸಲು ಬಳಸುತ್ತಿದ್ದ ಜಿಲೆಟಿನ್ ಕಡ್ಡಿಗಳನ್ನು ಅವರು ಸ್ಥಳಾಂತರಗೊಳ್ಳುವ ಸಂದರ್ಭ
ದಲ್ಲಿ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಮಕ್ಕಳು ಆಟ ಆಡುವಾಗ ಅವು ಸಿಕ್ಕಿದ್ದು, ಈ ಅವಘಡ ಸಂಭವಿಸಿದೆ ಎಂದು ಆಲೂರು ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್ ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಡಿವೈಎಸ್ಪಿ ಗೋಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.