ಬೆಂಗಳೂರು: ‘ಭ್ರೂಣ ಲಿಂಗಪತ್ತೆ ಶಿಕ್ಷಾರ್ಹ ಅಪರಾಧ. ಭ್ರೂಣ ಲಿಂಗ ಪತ್ತೆ ಮಾಡುವ ಸ್ಕ್ಯಾನಿಂಗ್ ಸೆಂಟರ್‌ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ, ಬೀಗಮುದ್ರೆ ಹಾಕಲಾಗುವುದು’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನವು ‘ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಆಯ್ಕೆ ನಿಷೇಧ ಕಾಯ್ದೆ 1994’ರ ಕುರಿತು ಹಮ್ಮಿಕೊಂಡ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.
‘ಭ್ರೂಣ ಲಿಂಗ ಪತ್ತೆ ಕಾನೂನುಬಾಹಿರ ಎಂಬುದರ ಬಗ್ಗೆ ವೈದ್ಯರು ಜಾಗೃತಿ ಮೂಡಿಸಬೇಕು. ಭ್ರೂಣ ಲಿಂಗ ಪತ್ತೆಗೆ ಸಂಬಂಧಿಸಿದಂತೆವೈದ್ಯರಿಗೆ ಮೊದಲ ಪ್ರಕರಣದಲ್ಲಿ 3 ವರ್ಷ ಜೈಲು ಮತ್ತು ದಂಡ ವಿಧಿಸಲಾಗುತ್ತದೆ. ಪುನರಾವರ್ತನೆಯಾದಲ್ಲಿ 5 ವರ್ಷ ಜೈಲು ಶಿಕ್ಷೆಯ ಜತೆಗೆ ವೈದ್ಯ ವೃತ್ತಿ ನಡೆಸದಂತೆ ನಿರ್ಬಂಧ ವಿಧಿಸಲಾಗುವುದು.ಸ್ಕ್ಯಾನಿಂಗ್ ಸೆಂಟರ್‌ನ ಪರವಾನಗಿ ರದ್ದುಪಡಿಸಿ, ಕಠಿಣ ಕ್ರಮಕೈಗೊಳ್ಳಲಾಗುವುದು. ದೇಶದಲ್ಲಿ 2001ರ ವೇಳೆಗೆ ಸಾವಿರಕ್ಕೆ 933 ಇದ್ದ ಲಿಂಗಾನುಪಾತ, 2011ರ ವೇಳೆ 940ಕ್ಕೆ ಏರಿಕೆಯಾಗಿದೆ. ಆದರೂ ಪರಿಸ್ಥಿತಿ ಇನ್ನಷ್ಟು ಸುಧಾರಿಸಬೇಕಿದೆ. ವೈದ್ಯರ ಮೇಲೆ ಹೆಚ್ಚು ಜವಾಬ್ದಾರಿಯಿದೆ’ ಎಂದು ಹೇಳಿದರು.
‘ಹೆಣ್ಣು ಭ್ರೂಣ ಹತ್ಯೆ ನಿಷೇಧ ಸಂಬಂಧ 1994ರಲ್ಲಿ ಕಾಯ್ದೆ ರೂಪಿಸಲಾಯಿತು. 2011ರಲ್ಲಿ ಸಮಗ್ರ ತಿದ್ದುಪಡಿ ತಂದು, ಕಾನೂನು ಜಾರಿಗೊಳಿಸಲಾಗಿದೆ. ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ವೈದ್ಯರು ಆಮಿಷಕ್ಕೆ ಒಳಗಾಗಿ, ಇಲ್ಲವೇ ಒತ್ತಾಯಕ್ಕೆ ಭ್ರೂಣ ಲಿಂಗ ಪತ್ತೆ ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ’ಎಂದು ಎಚ್ಚರಿಕೆ ನೀಡಿದರು.
‘ಭ್ರೂಣ ಲಿಂಗ ಪತ್ತೆ ತಡೆಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ಇದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಈ ಸಮಿತಿಗೆ ಇದೆ’ ಎಂದು ಹೇಳಿದರು.
ಇಲಾಖೆಯಯೋಜನಾ ನಿರ್ದೇಶಕ ಡಾ.ಶ್ರೀನಿವಾಸನ್, ನಿರ್ದೇಶಕಿ ಡಾ. ಇಂದುಮತಿ, ಕಾರ್ಯಾಗಾರ ನಿರ್ದೇಶಕ ಆನುಜ್ ಗುಲಾಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.