ಬೆಂಗಳೂರು: ಗಾಜಾದಲ್ಲಿರುವ ಪ್ಯಾಲೆಸ್ಟೀನಿಯರನ್ನು ನಿವಾರಣೆ ಮಾಡುವ ಗುರಿ ಇಟ್ಟುಕೊಂಡು ಇಸ್ರೇಲ್ ನರಮೇಧ ಮಾಡುತ್ತಿದೆ ಎಂದು ಲೇಖಕ ಶಿವಸುಂದರ್ ತಿಳಿಸಿದರು.
ನಗರದಲ್ಲಿ ಗುರುವಾರ ನಡೆದ ‘ಪ್ಯಾಲೆಸ್ಟೀನ್ ಸಮಸ್ಯೆ’ಯ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಮಾಸ್ ದಾಳಿ ಖಂಡನಾರ್ಹ. ಆದರೆ, ಅದಕ್ಕೆ ಉತ್ತರಿಸುವ ನೆಪದಲ್ಲಿ ಇಸ್ರೇಲ್ ಬೇರೆ ಗುರಿಯನ್ನು ಇಟ್ಟುಕೊಂಡು ಜನಾಂಗೀಯ ದ್ವೇಷದ ನರಮೇಧ ನಡೆಸುತ್ತಿದೆ. ಗಾಜಾದಲ್ಲಿ ಇರುವ 23 ಲಕ್ಷ ಪ್ಯಾಲೆಸ್ಟೀನಿಯರನ್ನು ಈಜಿಪ್ಟ್‌ನ ಸಿನಾಯ್ ಭಾಗಕ್ಕೆ ತಳ್ಳಲು ಮುಂದಾಗಿದೆ. ಈಜಿಪ್ಟ್‌ನಲ್ಲಿ ಮಾನವೀಯ ನೆಲೆಯ ಸಂತ್ರಸ್ತ ನೆಲೆ ಎಂದು ಆರಂಭಿಸಲು ಅವರೇ ಸಂಪನ್ಮೂಲ ಒದಗಿಸುತ್ತಿದ್ದಾರೆ. ಸಿನಾಯ್ ಮತ್ತು ಗಾಜಾ ನಡುವೆ ನಿರ್ಜನ ಪ್ರದೇಶ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಮಾನವೀಯತೆಯೇ ವಿಚಾರಣೆಯಲ್ಲಿದೆ. ಇದರ ವಿರುದ್ಧ ಗಟ್ಟಿಧ್ವನಿ ಎತ್ತಬೇಕು ಎಂದು ಸೋನಿಯಾಗಾಂಧಿ ಒಂದು ಕಡೆ ಹೇಳುತ್ತಾರೆ. ಇನ್ನೊಂದು ಕಡೆ ಅವರದ್ದೇ ಪಕ್ಷವಿರುವ ಕರ್ನಾಟಕದಲ್ಲಿ ಗಟ್ಟಿಧ್ವನಿಯಲ್ಲ, ಪಿಸುಧ್ವನಿ ಎತ್ತಲೂ ಬಿಡದೇ ಇರುವುದು ವಿಪರ್ಯಾಸ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.
ವಕೀಲ ಬಿ.ಟಿ. ವೆಂಕಟೇಶ್ ಮಾತನಾಡಿ, ‘ಇಸ್ರೇಲ್ ಯುದ್ಧ ಮಾಡುತ್ತಿಲ್ಲ. ಯುದ್ಧಾಪರಾಧ ನಡೆಸುತ್ತಿದೆ. ನಿರಾಯುಧ ನಾಗರಿಕರ ಮೇಲೆ ಯಾವುದೇ ಹಿಂಸೆ ಮಾಡುವಂತಿಲ್ಲ ಎಂಬುದು ಜಿನೀವಾ ಒಪ್ಪಂದದಲ್ಲಿದೆ. ಆದರೆ, ಅದೇ ಅಪರಾಧವನ್ನು ಇಸ್ರೇಲ್ ಮಾಡುತ್ತಿದೆ. ಸಿರಿಯಾ, ಕಾಂಬೋಡಿಯಗಳಲ್ಲಿ ನಡೆದ ಹತ್ಯೆಗಳಿಗೂ ಯಾವುದೇ ವ್ಯತ್ಯಾಸವಿಲ್ಲ’ ಎಂದು ತಿಳಿಸಿದರು.
ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಲಬೀದ್ ಶಾಫಿ, ಜೆಐಎಚ್ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳಗಾಮಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.