ಬೆಂಗಳೂರು: ‘ಒಂದರಿಂದ ಐದನೆ ತರಗತಿಯವರೆಗೆ ಮಾತೃಭಾಷೆ ಶಿಕ್ಷಣವನ್ನು ಕಡ್ಡಾಯಗೊಳಿಸುವ ಸಂಬಂಧ 2015ರ ಶಿಕ್ಷಣ ಮಸೂದೆಗೆ ರಾಷ್ಟ್ರಪತಿಯ ಒಪ್ಪಿಗೆ ಪಡೆಯಬೇಕು’ ಎಂದು ಸರ್ಕಾರಕ್ಕೆ ಸಾಹಿತಿ ದೊಡ್ಡರಂಗೇಗೌಡ ಆಗ್ರಹಿಸಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ‘ಕನ್ನಡ ಶಿಕ್ಷಣ ಮಾಧ್ಯಮಕ್ಕೆ ಇರುವ ಅಡಚಣೆಯ ನಿವಾರಣೆಗಾಗಿ ಈ ಪತ್ರ ಬರೆಯುತ್ತಿದ್ದೇನೆ. ಒಂದರಿಂದ ಐದನೆ ತರಗತಿವರೆಗೆ ಮಾತೃಭಾಷೆ ಶಿಕ್ಷಣ ನೀಡಲು ಮಸೂದೆ ರಚಿಸಿ, ರಾಷ್ಟ್ರಪತಿ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಆ ಮಸೂದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ರಾಜ್ಯ ಸರ್ಕಾರವು ಈ ಮಸೂದೆಯ ಮಹತ್ವವನ್ನು ಕೇಂದ್ರಕ್ಕೆ ಮನವರಿಕೆ ಮಾಡಿಸಿ, ರಾಷ್ಟ್ರಪತಿಯ ಅಂಗೀಕಾರ ಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಮಾತೃಭಾಷೆ ಶಿಕ್ಷಣವನ್ನು ಪ್ರತಿಪಾದಿಸಿದ್ದಾರೆ. ‘ರಾಷ್ಟ್ರೀಯ ಶಿಕ್ಷಣ ನೀತಿ-2020’ರಲ್ಲಿ ಮಾತೃಭಾಷೆ ಅಥವಾ ಸ್ಥಳೀಯ ಭಾಷಾ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರಬೇಕೆಂದು ಸಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಆಕ್ಷೇಪಣೆಗಳನ್ನು ಬದಿಗಿಟ್ಟು, ಮಸೂದೆಯ ಅ೦ಗೀಕಾರಕ್ಕೆ ಕಳುಹಿಸಬೇಕು. ಇಲ್ಲವಾದರೆ, ಅದು ಕೇಂದ್ರ ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳಿಗೆ ಧಕ್ಕೆ ತಂದಂತಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.