ADVERTISEMENT

ಜಿಕೆವಿಕೆಯಲ್ಲಿ ಪ್ರತಿ ತಿಂಗಳು ‘ಕೃಷಿ ಉತ್ಪನ್ನ ಸಂತೆ’

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 15:38 IST
Last Updated 9 ಜುಲೈ 2024, 15:38 IST
<div class="paragraphs"><p>ಜಿಕೆವಿಕೆ</p></div>

ಜಿಕೆವಿಕೆ

   

ಬೆಂಗಳೂರು: ನಗರದ ಕೃಷಿ ವಿಶ್ವವಿದ್ಯಾಲಯದ (ಜಿಕೆವಿಕೆ) ಆವರಣದಲ್ಲಿ ಇನ್ನು ಮುಂದೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ‘ಕೃಷಿ ಉತ್ಪನ್ನ ಸಂತೆ’ ಆಯೋಜಿಸಲಾಗುತ್ತಿದೆ.

ಕಳೆದ ತಿಂಗಳು ಪ್ರಾಯೋಗಿಕವಾಗಿ ನಡೆದ ಕೃಷಿ ಉತ್ಪನ್ನಗಳ ಸಂತೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿರುವುದರಿಂದ ಉತ್ತೇಜನಗೊಂಡಿರುವ ಕೃಷಿ ವಿಶ್ವವಿದ್ಯಾಲಯ, ತಿಂಗಳಿಗೊಮ್ಮೆ ಸಂತೆ ನಡೆಸಲು ನಿರ್ಧರಿಸಿದೆ.

ADVERTISEMENT

‘ಕಳೆದ ಬಾರಿ ಐದು ಗಂಟೆ ಅವಧಿಯ ಸಂತೆಗೆ 15 ಸಾವಿರ ಮಂದಿ ಭೇಟಿ ನೀಡಿದ್ದರು. ಸುಮಾರು ₹10 ಲಕ್ಷ ಮೌಲ್ಯದ ಉತ್ಪನ್ನಗಳು ಮಾರಾಟವಾಗಿದ್ದವು. ನಿರೀಕ್ಷೆಗೆ ಮೀರಿ ಸ್ಪಂದನೆ ಸಿಕ್ಕಿತು. ವಾರಕ್ಕೊಮ್ಮೆ ಸಂತೆ ನಡೆಸಿ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು. ಹಾಗಾಗಿ, ಎರಡನೇ ಪ್ರಯೋಗವಾಗಿ ಪ್ರತಿ ತಿಂಗಳ ಒಂದು ದಿನ ಸಂತೆ ನಡೆಸಲು ನಿರ್ಧರಿಸಿದೆವು. ಈ ಬಾರಿ ಜುಲೈ 27ರಂದು ಸಂತೆ ನಡೆಸುತ್ತಿದ್ದೇವೆ’ ಎಂದು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಎಸ್.ವಿ.ಸುರೇಶ್ ತಿಳಿಸಿದರು.

‘ಹಿಂದಿನ ಸಂತೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ಉತ್ಪನ್ನಗಳನ್ನಷ್ಟೇ ಮಾರಾಟಕ್ಕೆ ಇಡಲಾಗಿತ್ತು. ಈ ಬಾರಿ ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರದ ಬೆಂಬಲದೊಂದಿಗೆ ರಚನೆಯಾಗಿರುವ ರೈತ ಉತ್ಪಾದಕ ಸಂಸ್ಥೆಗಳು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ತಯಾರಿಸಿರುವ ಉತ್ಪನ್ನಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

‌‘ಸಂತೆಯ ಉದ್ದೇಶ, ಉತ್ಪನ್ನಗಳ ಮಾರಾಟವಷ್ಟೇ ಅಲ್ಲದೇ, ಕೃಷಿ ವಿಶ್ವವಿದ್ಯಾಲಯದ ಚಟುವಟಿಕೆಗಳನ್ನು ಜನರಿಗೆ ಪರಿಚಯಿಸುವುದೂ ಆಗಿದೆ. ಜೊತೆಗೆ, ಹಣ್ಣು, ತರಕಾರಿಗಳ, ಕೈತೋಟಕ್ಕೆ ಬೇಕಾದ ತರಕಾರಿ, ಹೂವಿನ ಗಿಡಗಳ ಬೀಜಗಳು, ಹಣ್ಣಿನ ಗಿಡಗಳು ಲಭ್ಯವಿರುತ್ತವೆ. ಕೈತೋಟಕ್ಕೆ ಬೇಕಾದ ಉಪಕರಣಗಳು, ಯಂತ್ರೋಪಕರಣಗಳೂ ಇರುತ್ತವೆ’ ಎಂದು ಮಾಹಿತಿ ನೀಡಿದರು.

ಈ ಪ್ರಯೋಗವೂ ಯಶಸ್ವಿಯಾದರೆ, ಮುಂದಿನ ಸಂತೆಯನ್ನು ಇನ್ನಷ್ಟು ದೊಡ್ಡ ವೇದಿಕೆಯಲ್ಲಿ ನಡೆಸುವ ಯೋಚನೆ ಇದೆ. ಕೃಷಿ ವಿಶ್ವವಿದ್ಯಾಲಯದಿಂದ ತಂತ್ರಜ್ಞಾನ ಪಡೆದು ಉದ್ಯಮ ನಡೆಸುತ್ತಿರುವವರನ್ನೂ ಆಹ್ವಾನಿಸಿ, ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.