ಬೆಂಗಳೂರು: ‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನವೆಂಬರ್ 14ರಿಂದ 17ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಹವಾಮಾನ ಚತುರ ಡಿಜಿಟಲ್ ಕೃಷಿ’ ಎಂಬ ಘೋಷವಾಕ್ಯದಡಿ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಳದಲ್ಲಿ ಹವಾಮಾನಕ್ಕೆ ಹೊಂದಿಕೊಂಡು ಹೋಗುವ ಕೃಷಿಗೆ ಅನುಕೂಲವಾಗುವ ತಾಂತ್ರಿಕತೆ ಪರಿಚಯಿಸಲಾಗುತ್ತಿದೆ. ಇದಕ್ಕಾಗಿಯೇ ವಿಶ್ವವಿದ್ಯಾಲಯದಿಂದ ಅಭಿವೃದ್ಧಿಪಡಿಸಿರುವ ಸೆನ್ಸಾರ್ ಆಧಾರಿತ ತಂತ್ರಜ್ಞಾನಗಳು ಪ್ರದರ್ಶನ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
‘ಕೃಷಿ ಮೇಳದಲ್ಲಿ 700ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಸಿರಿಧಾನ್ಯ ಆಹಾರಕ್ಕೆ ಸಂಬಂಧಿಸಿದಂತೆ ವಿಶೇಷ ಮಳಿಗೆಗಳು ಇರಲಿವೆ. ಮೇಳಕ್ಕೆ ಆಗಮಿಸುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆ ಮಾಡಲಾಗುವುದು. ಇದರ ಜೊತೆಗೆ ಉಪಹಾರ ಮಳಿಗೆಗಳು ಇರಲಿವೆ’ ಎಂದು ಹೇಳಿದರು.
‘ಮೇಳಕ್ಕೆ ಬರುವವರಿಗೆ ಪ್ರವೇಶ ಉಚಿತವಿದೆ. ಜಿಕೆವಿಕೆ ಗೇಟ್‌ನಿಂದ ಮೇಳ ನಡೆಯುವ ಸ್ಥಳಕ್ಕೆ ಕರೆದೊಯ್ಯಲು ವಿಶ್ವ ವಿದ್ಯಾಲಯದ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಕಾರು, ಬೈಕ್ ಹಾಗೂ ಇತರೆ ವಾಹನಗಳಲ್ಲಿ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.
‘ಮೇಳದಲ್ಲಿ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ, ನಾಲ್ಕು ಹೊಸ ತಳಿಗಳಾದ ಮುಸುಕಿನಜೋಳ ಸಂಕರಣ (ಎಂಎಎಚ್ 15–85), ಅಲಸಂದೆ (ಕೆಬಿಸಿ–12), ಸೂರ್ಯಕಾಂತಿ ಸಂಕರಣ (ಕೆಬಿಎಸ್‌ಎಚ್–90), ಬಾಜ್ರ ನೇಪಿಯರ್ ಸಂಕರಣ (ಪಿಬಿಎನ್–342) ಎಂಬ ತಳಿಗಳು ಬಿಡುಗಡೆಯಾಗಲಿದ್ದು, ಈ ತಳಿಗಳ ಪ್ರಾತ್ಯಕ್ಷಿಕೆಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳೆಯಲಾಗಿದೆ’ ಎಂದು ಹೇಳಿದರು.
‘ನ. 14ರಂದು ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಳಕ್ಕೆ ಚಾಲನೆ ನೀಡಲಿದ್ದು, ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅತಿಥಿಗಳಾಗಿ ಭಾಗವಹಿಸಲಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.
ಡಿಜಿಟಲ್ ಕೃಷಿ ತಂತ್ರಜ್ಞಾನಗಳನ್ನು ಬಳಸಿ ತಾಂತ್ರಿಕತೆಗಳ ಪ್ರದರ್ಶನ
* ಮಲ್ಟಿಸ್ಪೆಕ್ಟ್ರಲ್ ಡ್ರೋನ್
* ಕೃಷಿ ಡ್ರೋನ್
* ರೊಬೊಟ್ ಕೃಷಿ ಯಂತ್ರ
* ಹಣ್ಣಿನ ವರ್ಗೀಕರಣಗೊಳಿಸುವ ಯಂತ್ರ
* ಸ್ವಯಂಚಾಲಿತ ರಸಗೊಬ್ಬರ ಹರಡುವ ಯಂತ್ರ
* ಆಳ ನಿಯಂತ್ರಕ ರೋಟವೇಟರ್
* ಸ್ವಯಂಚಾಲಿತ ಬೂಮ್ ಸ್ಪ್ರೇಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.