ಬೆಂಗಳೂರು: ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಹವಾಮಾನ ಚತುರ ಡಿಜಿಟಲ್ ಕೃಷಿ’ ಶೀರ್ಷಿಕೆಯಡಿ ನಾಲ್ಕು ದಿನಗಳಿಂದ ನಡೆದ ಕೃಷಿ ಮೇಳಕ್ಕೆ ಭಾನುವಾರ ಸಂಭ್ರಮದ ತೆರೆ ಬಿತ್ತು.
ನಾಲ್ಕು ದಿನಗಳಲ್ಲಿ 34.13 ಲಕ್ಷ ಜನರು ಭೇಟಿ ನೀಡಿ ಮೇಳವನ್ನು ವೀಕ್ಷಿಸಿದರು. ₹6.17 ಕೋಟಿ ವಹಿವಾಟು ನಡೆಯಿತು. 53 ಸಾವಿರ ಮಂದಿ ಮಧ್ಯಾಹ್ನದ ಭೋಜನ ಸವಿದಿದ್ದಾರೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.
‘ಮಳೆಯ ಸಿಂಚನ’ದೊಂದಿಗೆ ಮೇಳ ಆರಂಭವಾಯಿತು. ಕೊನೆಯ ದಿನ ವಾರಾಂತ್ಯದ ರಜೆ ಕಾರಣ, ನಗರ ವಾಸಿಗಳು ಕುಟುಂಬ ಸಮೇತ ಮೇಳಕ್ಕೆ ಭೇಟಿ ನೀಡಿದ್ದರು. ‘ಪ್ರಾಣಿ ಪ್ರಪಂಚ’ದ ಮಳಿಗೆಗಳು, ಅಲಂಕಾರಿಕ ಮೀನಿನ ಮರಿಗಳ ಮಾರಾಟ ಮಳಿಗೆಗಳಲ್ಲಿ ಜನ ಜಾತ್ರೆ, ಆಹಾರ ಮಳಿಗೆಗಳಲ್ಲಂತೂ ಜನವೋ ಜನ.
ತಾರಸಿ ಕೃಷಿ, ನಗರ ತೋಟಗಾರಿಕೆ ಹವ್ಯಾಸವಿರುವ ‘ನಗರ ಕೃಷಿಕರು’ ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಿದ್ದರು. ತಮ್ಮಿಷ್ಟದ ಹೂವು, ಹಣ್ಣಿನ ಗಿಡಗಳನ್ನು ಖರೀದಿಸಿ ತೆರಳುತ್ತಿದ್ದರು. ತರಕಾರಿ, ಹೂವಿನ ಬೀಜಗಳು, ತೋಟಗಾರಿಕೆ ಪರಿಕರಗಳತ್ತಲೂ ಚಿತ್ತ ಹರಿಸಿದ್ದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಸಮಾರಂಭಕ್ಕೂ ಮುನ್ನ ಪ್ರಾತ್ಯಕ್ಷಿಕೆ ತಾಕುಗಳು, ಮಳಿಗೆಗಳಿಗೆ ಭೇಟಿ ನೀಡಿದರು. ಡಿಜಿಟಲ್ ಬೂಮ್ ಸ್ಪ್ರೇಯರ್ ಅರೆ ಸ್ವಯಂ ಚಾಲಿತ ಟ್ರ್ಯಾಕ್ಟರ್ ಅನ್ನು ಚಾಲನೆ ಮಾಡಿದರು. ಕೃಷಿಯಲ್ಲಿ ಡ್ರೋನ್ ಬಳಕೆ, ರಿಮೋಟ್ ಆಧಾರಿತ ನೆಲಗಡಲೆ ಬಿತ್ತುವ ಯಂತ್ರ ‘ಕೃಷಿ ಬಾಟ್’ನ ಕಾರ್ಯವೈಖರಿ ಕುರಿತು ಮಾಹಿತಿ ಪಡೆದರು. ಜೈವಿಕ ಇಂಧನ ಮಳಿಗೆ, ತರಕಾರಿ ಕೃಷಿ ತಾಕುಗಳು ಸೇರಿ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿದರು.
ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಎಂ.ಎಚ್.ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಡಾ.ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ ಮತ್ತು ಡಾ ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು: ‘ಯುವ ಸಮೂಹ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಬೇಕು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಲಹೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಸಾಧಕ ರೈತರಿಗೆ ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು‘ಕೃಷಿ ಮೇಳಕ್ಕೆ ಭೇಟಿ ನೀಡಿದ ರೈತರು ತಾವು ಕಂಡ ಕೃಷಿ ತಾಂತ್ರಿಕತೆಗಳು ತಳಿಗಳ ಕುರಿತು ಮತ್ತಷ್ಟು ರೈತರಿಗೆ ಮಾಹಿತಿ ಹಂಚಬೇಕು’ ಎಂದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ.ಸುರೇಶ ಮಾತನಾಡಿ ‘ಈ ಕೃಷಿ ಮೇಳ ಭವಿಷ್ಯದ ಡಿಜಿಟಲ್ ಕೃಷಿಗೆ ಮುನ್ನುಡಿ ಬರೆದಿದೆ’ ಎಂದು ಅಭಿಪ್ರಾಯಪಟ್ಟರು. ‘ಮುಂದಿನ ದಿನಗಳಲ್ಲಿ ಡಿಜಿಟಲ್ ಕೃಷಿಯನ್ನು ‘ಕೃಷಿ ಯಂತ್ರಧಾರೆ’ಗೆ ಅಳವಡಿಸಲು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.