ADVERTISEMENT

ಜಿಕೆವಿಕೆ: ನವೆಂಬರ್‌ 14ರಿಂದ ನಾಲ್ಕು ದಿನ ಕೃಷಿ ಮೇಳ

ನಾಲ್ಕು ಹೊಸ ತಳಿಗಳ ಬಿಡುಗಡೆ, ತಂತ್ರಜ್ಞಾನಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 14:19 IST
Last Updated 26 ಅಕ್ಟೋಬರ್ 2024, 14:19 IST
<div class="paragraphs"><p>ಜಿಕೆವಿಕೆ</p></div>

ಜಿಕೆವಿಕೆ

   

ಬೆಂಗಳೂರು: ‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನವೆಂಬರ್‌ 14ರಿಂದ 17ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಹವಾಮಾನ ಚತುರ ಡಿಜಿಟಲ್‌ ಕೃಷಿ’ ಎಂಬ ಘೋಷವಾಕ್ಯದಡಿ ಕೃಷಿ ಮೇಳ ಆಯೋಜಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಈ ಬಾರಿಯ ಮೇಳದಲ್ಲಿ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ, ನಾಲ್ಕು ಹೊಸ ತಳಿಗಳಾದ ಮುಸುಕಿನಜೋಳ ಸಂಕರಣ (ಎಂಎಎಚ್‌ 15–85), ಅಲಸಂದೆ (ಕೆಬಿಸಿ–12), ಸೂರ್ಯಕಾಂತಿ ಸಂಕರಣ (ಕೆಬಿಎಸ್‌ಎಚ್–90), ಬಾಜ್ರ ನೇಪಿಯರ್‌ ಸಂಕರಣ (ಪಿಬಿಎನ್‌–342) ಎಂಬ ತಳಿಗಳು ಬಿಡುಗಡೆಯಾಗಲಿವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಸೆನ್ಸಾರ್ ಆಧಾರಿತ ಡ್ರೋನ್, ಬೆಳೆಗಳಿಗೆ ಟ್ರ್ಯಾಕ್ಟರ್‌ ಮೂಲಕ ಔಷಧಿ ಸಿಂಪಡಿಸುವ ಸೆನ್ಸಾರ್‌ ಆಧಾರಿತ ಯಂತ್ರಗಳು ಹಾಗೂ ನೂತನ ತಂತ್ರಜ್ಞಾನಗಳು ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯಲಿವೆ. ಒಂದು ಎಕರೆ ಪ್ರದೇಶದಲ್ಲಿ ಡಿಜಿಟಲ್‌ ಕೃಷಿಗೆ ಸಂಬಂಧಿಸಿದ ಯಂತ್ರಗಳು ಅನಾವರಣಗೊಳ್ಳಲಿವೆ’ ಎಂದರು.

ಕೃಷಿ ಮೇಳದಲ್ಲಿ 700ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಸಿರಿಧಾನ್ಯ ಪೂರಕ ಆಹಾರಕ್ಕೆ ಸಂಬಂಧಿಸಿದಂತೆ ವಿಶೇಷ ಮಳಿಗೆಗಳು ಇರಲಿವೆ. ಮೇಳಕ್ಕೆ ಆಗಮಿಸುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆ ಮಾಡಲಾಗುವುದು. ಇದರ ಜೊತೆಗೆ ತಿಂಡಿ ಮಾರಾಟದ ಮಳಿಗೆಗಳು ಇರಲಿವೆ ಎಂದು ಹೇಳಿದರು.

‘ಮೇಳಕ್ಕೆ ಬರುವವರಿಗೆ ಪ್ರವೇಶ ಉಚಿತವಿದೆ. ಜಿಕೆವಿಕೆ ಗೇಟ್‌ನಿಂದ ಒಳಗಡೆ ಕರೆದೊಯ್ಯಲು ಸಂಸ್ಥೆಯ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಕಾರು, ಬೈಕ್ ಹಾಗೂ ಇತರೆ ವಾಹನಗಳಲ್ಲಿ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಕೆ.ಸಿ. ನಾರಾಯಣಸ್ವಾಮಿ, ತರಬೇತಿ ಸಂಯೋಜಕ ಕೆ. ಶಿವರಾಮು ಸುದ್ದಿಗೋಷ್ಠಿಯಲ್ಲಿದ್ದರು.

ಆರು ರೈತರಿಗೆ ರಾಜ್ಯಮಟ್ಟದ ಕೃಷಿ ಪ್ರಶಸ್ತಿ

ಉತ್ತಮ ಸಾಧನೆ ಮಾಡಿದ ಆರು ಜನ ರೈತರಿಗೆ ರಾಜ್ಯಮಟ್ಟದ ‘ಕೃಷಿ ಪ್ರಶಸ್ತಿ’ಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರಕಟಿಸಿದೆ.

‘ಎಚ್.ಡಿ.ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ’ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕುರಟಹಳ್ಳಿಯ ಸಿ.ಆರ್. ರಾಧಾಕೃಷ್ಣ, ‘ಎಂ.ಎಚ್.ಮರೀಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ’ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿಯ ರೂಪಾ ಎಚ್.ಪಿ. ಆಯ್ಕೆಯಾಗಿದ್ದಾರೆ’ ಎಂದು ಎಸ್.ವಿ. ಸುರೇಶ ತಿಳಿಸಿದರು.

‘ಕ್ಯಾನ್‌ ಬ್ಯಾಂಕ್‌ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ’ಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ವಗರಹಳ್ಳಿಯ ಪ್ರವೀಣ್ ವಿ.ಎಸ್., ‘ಕ್ಯಾನ್ ಬ್ಯಾಂಕ್ ರಾಜ್ಯಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ’ಗೆ ರಾಮನಗರ ಜಿಲ್ಲೆಯ ಕಗ್ಗಲಹಳ್ಳಿಯ ಶಾಂತಮ್ಮ ವೈ.ಸಿ., ‘ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ’ಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಉಣ್ಣೇನಹಳ್ಳಿಯ ನಾಗವರ್ಮ ಯು.ಎಂ., ಹಾಗೂ ‘ಆರ್.ದ್ವಾರಕೀನಾಥ್
ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತೆ ಪ್ರಶಸ್ತಿ’ಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಎಂ. ಶಾಲಿನಿ ಆಯ್ಕೆಯಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.