ಬೆಂಗಳೂರು: 'ಎಣ್ಣೆ ಇಲ್ಲದೆ ಪಾಪ್
ಕಾರ್ನ್, ಸಂಡಿಗೆ–ಹಪ್ಪಳ ಆಗುತ್ತಾ? ನೋಡೋಣ ಒಂದು ಕೊಡಿ... ಇದರ
ಮೇಲೆ ನಿಂತರೆ ಒತ್ತಡ ಕಡಿಮೆ
ಯಾಗುತ್ತಾ? ನಿಂತು ನೋಡುವೆ... ಈ
ಯಂತ್ರದಿಂದ ಮಸಾಜ್ ಮಾಡಿಕೊಂಡರೆ
ಎಲ್ಲ ನೋವೂ ಹೋಗುತ್ತಾ...?’
ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಪ್ರಥಮ ದಿನ ಬುಧವಾರ ಪ್ರದರ್ಶನ ಕೇಂದ್ರದ ಕೆಲವು ಮಳಿಗೆಗಳಲ್ಲಿ ಇಂತಹ ಪ್ರಶ್ನೆ
ಗಳಿದ್ದವು. ತಿನಿಸು ಸವಿಯಲು, ಮಸಾಜ್ ಮಾಡಿಸಿಕೊಳ್ಳಲು ನೂಕು
ನುಗ್ಗಲು ಉಂಟಾಗಿತ್ತು. ಆದರೆ, ಇತರೆ ಮಳಿಗೆಗಳಲ್ಲಿ ಒಂದಿಬ್ಬರು ಮಾತ್ರ ಇದ್ದರು. ಹಲವು ಮಳಿಗೆಗಳು ಆರಂಭವೇ ಆಗಿರಲಿಲ್ಲ.
ಬೋಂಡಾ, ಬಜ್ಜಿ, ಸಮೋಸಾ ಬಿಟ್ಟು ಎಣ್ಣೆ ಇಲ್ಲದೆ ಎಲ್ಲವನ್ನೂ ಕರಿಯಬಹುದು ಎಂದು ಮಳಿಗೆಯವರು ಹೇಳುತ್ತಿದ್ದರೆ, ಸಾಕಷ್ಟು ಮಂದಿ ಬಂದು ಅದರ ರುಚಿ ನೋಡುತ್ತಿದ್ದರು. ಅಕ್ಕಪಕ್ಕದ ಮಳಿಗೆಯವರೂ ಈ ಯಂತ್ರದ
ಬಗ್ಗೆ ವಿಚಾರಿಸಲು ನಿಂತಿದ್ದರು. ಕಡಲೆಬೀಜ, ಪಾಪ್‌ಕಾರ್ನ್, ಸಂಡಿಗೆ, ಹಪ್ಪಳದ ರುಚಿ ನೋಡಲು ನೂಕುನುಗ್ಗಲು ಅಲ್ಲಿತ್ತು.
ಇನ್ನು ಮಸಾಜ್ ಯಂತ್ರದ ಮಳಿಗೆಗಳಲ್ಲಿ ಅದರ ಪ್ರಯೋಜನ ತಿಳಿದುಕೊಂಡು, ಅದರ ಸೌಲಭ್ಯವನ್ನೂ ಪಡೆದುಕೊಳ್ಳಲು ಸಾಕಷ್ಟು ಮಂದಿ ಸಾಲುಗಟ್ಟಿದ್ದರು. ಬಿಡುವಿನ ವೇಳೆಯಲ್ಲಿ ಪೊಲೀಸ್ ಸಿಬ್ಬಂದಿಯೂ ಈ ಯಂತ್ರಗಳ ಮಾಹಿತಿ ಪಡೆದು, ಕಾಲುಚಾಚಿ ಕುಳಿತುಕೊಂಡು ಮಸಾಜ್ ಮಾಡಿಸಿಕೊಂಡರು. ‘ಒತ್ತಡ ಎಲ್ಲ ಹೋಗುತ್ತಂತೆ ಸರ್, ತೆಗೆದುಕೊಳ್ಳಿ’ ಎಂದು ಸಹೋದ್ಯೋಗಿಗಳು ಹೇಳುತ್ತಿದ್ದದ್ದು ಸಾಮಾನ್ಯವಾಗಿತ್ತು.
ಸಾವಯವ ತಿನಿಸು, ಆರೋಗ್ಯಕರ ಪಾನೀಯಗಳ ಮಳಿಗೆಗಳಲ್ಲೂ ವಿಚಾರಣೆ ಸಾಕಷ್ಟಿತ್ತು. ಎಳನೀರು ಪೌಡರ್, ದ್ರಾಕ್ಷಾರಸ (ವೈನ್) ಮಳಿಗೆಗಳಲ್ಲಿ ಅದರ ಸ್ಯಾಂಪಲ್‌ಗೆ ಭಾರಿ ಬೇಡಿಕೆ ಇದ್ದರೂ, ಅದು ಲಭ್ಯವಿರಲಿಲ್ಲ. ಒಂದು ಬಾಕ್ಸ್‌ನಂತಿರುವ ಉಪಕರಣವನ್ನು ಮನೆ ಪ್ಲಗ್‌ಗೆ ಅಳವಡಿಸಿದರೆ ಶೇ 30ರಷ್ಟು ವಿದ್ಯುತ್ ಉಳಿತಾಯವಾಗುತ್ತದೆ ಎಂಬ ಮಳಿಗೆಯ ಪ್ರಾತ್ಯಕ್ಷಿಕೆ ಗಮನಸೆಳೆಯುತ್ತಿತ್ತು.
ಪರಿಸರ ಸ್ನೇಹಿಯಾದ ತೆಂಗಿನ ಒಣಗಿನ ಎಲೆಗಳಿಂದ ತಯಾರಿಸಲಾದ ಪೆನ್ ಹಾಗೂ ಸ್ಟ್ರಾ ಆಕರ್ಷಿಸಿದವು. ಮರುಬಳಸಬಹುದಾದ ಹತ್ತಿಯ ಬ್ಯಾಗ್‌ಗಳನ್ನು ಗ್ರಾಹಕರು ಕೇಳಿದ ಅಳತೆ ಹಾಗೂ ವಿನ್ಯಾಸದಲ್ಲಿ ಒದಗಿಸುವ ಬಾಗಲಕೋಟೆಯ ಪ್ರಿಂಟ್ ಪಾರ್ಕ್ ಹೆಚ್ಚು ಗ್ರಾಹಕರನ್ನು ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.