ಬೆಂಗಳೂರು: ಜಾಗತಿಕ ತಾಪಮಾನ ಹೆಚ್ಚಳದಿಂದ ದಕ್ಷಿಣ ವಲಯದಲ್ಲಿ ಉಂಟಾಗಲಿರುವ ಹವಾಮಾನ ವೈಪರಿತ್ಯದ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಅಂಶವನ್ನು ‘ಅಬ್ಸರ್ವ್ ರಿಸರ್ಚ್ ಫೌಂಡೇಶನ್ ಹಾಗೂ ದಸ್ರಾ ಸಂಸ್ಥೆ’ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಿ-20 ಶೃಂಗಸಭೆಯ ಅಂಗವಾಗಿ ಬಿಡುಗಡೆ ಮಾಡಿದ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ.
ಹವಾಮಾನ ಬದಲಾವಣೆಯ ಪರಿಣಾಮದಿಂದ ಅಪಾಯದಲ್ಲಿರುವ ದೇಶಗಳ ಪೈಕಿ ಭಾರತ 5ನೇ ಸ್ಥಾನದಲ್ಲಿದೆ. ಭಾರತದ ಅಗ್ರ ಐದು ನಗರಗಳು ತಾಪಮಾನ ಏರಿಕೆಗೆ ಶೇ 10ರಷ್ಟು ಕೊಡುಗೆ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಇಂತಹ ನಗರಗಳು ಹೆಚ್ಚಲಿವೆ. ಸರ್ಕಾರವು ಈ ಬಗ್ಗೆ ಹೆಚ್ಚು ಜಾಗೃತಿ ವಹಿಸುವ ಅವಶ್ಯಕತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ದಸ್ರಾ ಇಂಡಿಯಾ ಸಂಸ್ಥೆಯ ನೀರಾ ನುಂಡಿ, ‘ಜಾಗತಿಕ ತಾಪಮಾನವನ್ನು ಕೆಲವರಿಂದ ಮಾತ್ರ ಸರಿಪಡಿಸಲು ಸಾಧ್ಯವಿಲ್ಲ. ವಾಣಿಜ್ಯೀಕರಣ, ಜಾಗತೀಕರಣದಿಂದ ಭೂಭಾಗಗಳ ತಾಪಮಾನ ವಿಪರೀತ ಏರಿಕೆಯಾಗುತ್ತಿದೆ. ಇದರಿಂದ, ಹವಾಮಾನದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ’ ಎಂದು ತಿಳಿಸಿದ್ದಾರೆ.
ಆರೋಗ್ಯ ಮತ್ತು ಪರಿಸರದಲ್ಲಿ ಬೆಳವಣಿಗೆ ಕಾಣಲು ಜಾಗತಿಕ ಮಟ್ಟದಲ್ಲಿ ಸಮೂಹ ಸಹಕಾರ ನೀಡಬೇಕು. ಖಾಸಗಿ, ಸಾರ್ವಜನಿಕ, ಲೋಕೋಪಕಾರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪರಿಸರದ ಸಂರಕ್ಷಣೆ ಮಾಡಬೇಕು. ಜಾಗತಿಕ ತಾಪಮಾನ ನಿಯಂತ್ರಿಸಲು ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕು ಎಂಬ ಸಲಹೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.