ADVERTISEMENT

ಬೆಂಗಳೂರು: ₹ 5 ಲಕ್ಷ ಮೌಲ್ಯದ ಗೋವಾ ಮದ್ಯ ಜಪ್ತಿ

ಬಸ್‌ನಲ್ಲಿ ತುಂಬಿ ಮದ್ಯದ ಬಾಟಲ್‌ ಕಳುಹಿಸುತ್ತಿದ್ದ ಮದ್ಯವರ್ತಿಗಳು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 14:20 IST
Last Updated 30 ಅಕ್ಟೋಬರ್ 2024, 14:20 IST
ಬಂಧಿತ ಆರೋಪಿಯೊಂದಿಗೆ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆ ಸಿಬ್ಬಂದಿ
ಬಂಧಿತ ಆರೋಪಿಯೊಂದಿಗೆ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆ ಸಿಬ್ಬಂದಿ   

ಬೆಂಗಳೂರು: ಗೋವಾದಿಂದ ಅಕ್ರಮವಾಗಿ ಮದ್ಯ ತರಿಸಿಕೊಂಡು ಮನೆಯಲ್ಲಿ ದಾಸ್ತಾನು ಮಾಡಿಕೊಂಡು, ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿ ಪುರುಷೋತ್ತಮನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ವಿವಿಧ ಬ್ರ್ಯಾಂಡ್‌ನ ₹5 ಲಕ್ಷ ಮೌಲ್ಯದ ಮದ್ಯವನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ.

ಅಬಕಾರಿ ಇಲಾಖೆಯ ದಕ್ಷಿಣ ವಿಭಾಗದ ಜಂಟಿ ಆಯುಕ್ತರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

‘ಆರೋಪಿ ಮನೆಯಲ್ಲಿ 18 ಬ್ರ್ಯಾಂಡ್‌ಗಳ 144 ಬಾಟಲ್‌ಗಳಲ್ಲಿ 151.750 ಲೀಟರ್ ಮದ್ಯ ದೊರೆತಿದೆ. ಎಲ್ಲ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಗೋವಾದ ಮದ್ಯದ ಅಂಗಡಿಯವರ ಜತೆಗೆ ಆರೋಪಿ ಸಂಪರ್ಕ ಹೊಂದಿದ್ದ. ಕಡಿಮೆ ಬೆಲೆಗೆ ಮದ್ಯ ತರಿಸಿಕೊಳ್ಳುತ್ತಿದ್ದ. ಗೋವಾದ ಮಧ್ಯವರ್ತಿಗಳು ಬಸ್‌ ಮೂಲಕ ಮದ್ಯದ ಬಾಟಲ್‌ಗಳನ್ನು ಕಳುಹಿಸುತ್ತಿದ್ದರು. ಆರೋಪಿ ಅವುಗಳನ್ನು ಮನೆಯಲ್ಲಿ ಸಂಗ್ರಹಿಸಿಕೊಂಡು ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದ’ ಎಂದು ಮಾಹಿತಿ ನೀಡಿದ್ದಾರೆ.

‘ಬನಶಂಕರಿ ಎರಡನೇ ಹಂತದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಆರೋಪಿ ನಿಂತಿದ್ದ. ಆತನ ಚಲನವಲನ ಅನುಮಾನ ಮೂಡಿಸಿತ್ತು. ಈ ವೇಳೆ ಬ್ಯಾಗ್ ತೆಗೆದು ಪರಿಶೀಲಿಸಿದಾಗ ‘ಗೋವಾದಲ್ಲಿ ಮಾತ್ರ ಮಾರಾಟಕ್ಕೆ’ ಎಂದು ನಮೂದಿಸಿದ್ದ ಮದ್ಯದ ಬಾಟಲಿಗಳು ಸಿಕ್ಕಿದ್ದವು. ನಂತರ, ಆರೋಪಿಯ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಯಿತು’ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಅಬಕಾರಿ ಕಾಯ್ದೆ 1965ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.