ಬೆಂಗಳೂರು: ರಾಜ್ಯದಲ್ಲಿ 2.28 ಲಕ್ಷ ಎಚ್.ಐ.ವಿ ಸೋಂಕಿತರಿಗೆ ಎಆರ್‌ಟಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಸುಮಾರು 1.91 ಲಕ್ಷ ಸೋಂಕಿತರು ಮಾತ್ರ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಯುವ ದಿನಾಚರಣೆ ಮತ್ತು ಎಚ್‌ಐವಿ ತಡೆಗಟ್ಟಲು ಐ.ಇ.ಸಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
2030ರೊಳಗೆ ಎಚ್‌ಐವಿ ಸೋಂಕು ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ. ಜನ
ಸಾಮಾನ್ಯರಲ್ಲಿ ಎಚ್‌ಐವಿ ಹರಡುವಿಕೆಯ ಬಗ್ಗೆ ಸುಮಾರು ಎರಡು ತಿಂಗಳು ರಾಜ್ಯದ ವಿವಿಧೆಡೆ ಭಿತ್ತಿಪತ್ರಗಳ ಹಂಚಿಕೆ, ಬೀದಿ ನಾಟಕಗಳ ಮೂಲಕ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಲಾಗುತ್ತದೆ. ವೈದ್ಯರು, ಆಶಾ ಕಾರ್ಯಕರ್ತೆಯರು ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
‘ತಪಾಸಣೆ ವೇಳೆ ಎಚ್‌ಐವಿ ಸೋಂಕು ಪತ್ತೆಯಾದ ತಕ್ಷಣ ಭಯಪಡದೆ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ನೀಡಲಾಗುತ್ತದೆ. ಸೋಂಕಿತರು ಪೌಷ್ಟಿಕ ಆಹಾರ ಸೇವನೆ, ನಿಯಮಿತ ಔಷಧದಿಂದ ಆರಾಮದಾಯಕ ಜೀವನ ಸಾಗಿಸಬಹುದು’ ಎಂದರು.
‘ಯುವಜನರು ಹೆಚ್ಚು ಈ ಸೋಂಕಿಗೆ ತುತ್ತಾಗುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದ ಸಚಿವರು, ‘ಬಿಟ್ಟೂ ಬಿಡದೇ ಜ್ವರ ಬರುವುದು, ಚರ್ಮ ಸಂಬಂಧಿತ ರೋಗಗಳು, ಟಿ.ಬಿ. ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು’ ಎಂದು ಅವರು ಸಲಹೆ ನೀಡಿದರು.
ಯುವಜನರು ಮಾದಕ ವಸ್ತು ಸೇವನೆ, ಧೂಮಪಾನದಂತಹ ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಾರೆ, ವ್ಹೀಲಿ ಮಾಡುತ್ತಾರೆ. ಇದರಿಂದ ಅಪಘಾತಕ್ಕೀಡಾಗಿ ಮೃತಪಡುವವರೇ ಹೆಚ್ಚು. ಧೂಮಪಾನದಿಂದ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆ ಬರುತ್ತದೆ ಎಂದು ಗೊತ್ತಿದ್ದರೂ ದುಶ್ಚಟ ಬಿಡುವುದಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.