ADVERTISEMENT

ಶ್ರೀಮಂತರು ಮಾತ್ರ ರಾಜಕೀಯ ಕ್ಷೇತ್ರಕ್ಕೆ: ಬಿ.ಆರ್. ಪಾಟೀಲ ಅಭಿಮತ

ಜಾರ್ಜ್‌ ಫರ್ನಾಂಡಿಸ್‌ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 14:48 IST
Last Updated 29 ಜೂನ್ 2024, 14:48 IST
ಬಿ.ಆರ್. ಪಾಟೀಲ
ಬಿ.ಆರ್. ಪಾಟೀಲ   

ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ರಾಜಕಾರಣದ ಸ್ವರೂಪ ಬದಲಾವಣೆಗೊಂಡಿದ್ದು, ಶ್ರೀಮಂತರು ಮಾತ್ರ ರಾಜಕೀಯ ಕ್ಷೇತ್ರಕ್ಕೆ ಬರುತ್ತಿದ್ದಾರೆ’ ಎಂದು ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷ ಬಿ.ಆರ್. ಪಾಟೀಲ ಹೇಳಿದರು.

ಜಾರ್ಜ್‌ ಫರ್ನಾಂಡಿಸ್‌ ಸೋಷಿಯಲ್ ಎಜುಕೇಶನ್ ಟ್ರಸ್ಟ್‌ ಶನಿವಾರ ಆಯೋಜಿಸಿದ್ದ ‘ಜಾರ್ಜ್‌ ಫರ್ನಾಂಡಿಸ್ ಅವರ 95ನೇ ಜನ್ಮದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಾಜಕಾರಣದ ಪಲ್ಲಟಗಳು ಬದಲಾಗಿದ್ದು, ರಾಜಕೀಯದಲ್ಲಿ ಶ್ರೀಮಂತರು ಸೇರಿದಂತೆ ಪ್ರಬಲರನ್ನು ಮಾತ್ರ ಕಾಣಬಹುದು. ಸಚಿವರಾಗಿದ್ದ ಎಸ್.ಕೆ. ಕಾಂತಾ ಅವರ ಕೊನೆಯ ಚುನಾವಣೆಯಲ್ಲಿ 6 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಜನ ವ್ಯಕ್ತಿತ್ವ, ವಿಚಾರ, ನಡೆ–ನುಡಿಯನ್ನು ನೋಡದೇ, ಕಾಂಚಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಾರ್ಜ್‌ ಫರ್ನಾಂಡಿಸ್‌, ಕಾಂತಾ, ಮೈಕೆಲ್‌ ಫರ್ನಾಂಡಿಸ್‌ ಸೇರಿದಂತೆ ನನ್ನಂಥವರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಆಗುವುದಿಲ್ಲ’ ಎಂದರು.

ADVERTISEMENT

‘ಸಮಾಜವಾದಿಗಳು ಒಂದೆಡೆ ಸೇರಲು ಕೋಲ್ಕತ್ತ, ಲಖನೌ, ಹೈದರಾಬಾದ್‌ನಲ್ಲಿ ಲೋಹಿಯಾ ಭವನಗಳಿವೆ. ಆದರೆ, ನಮ್ಮಲ್ಲಿ ಇಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಲೋಹಿಯಾ ಭವನ ನಿರ್ಮಿಸಲು ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಬೆಂಗಳೂರಿನ ಜಾನ್ಸನ್‌ ಮಾರುಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ‘ನಮ್ಮ ಮೆಟ್ರೊ’ ನಿಲ್ದಾಣ ಹಾಗೂ ಮಹಾತ್ಮಗಾಂಧಿ ರಸ್ತೆಗೆ ಸಂಪರ್ಕಿಸುವ ಹೊಸೂರು ರಸ್ತೆಗೆ ಜಾರ್ಜ್‌ ಫರ್ನಾಂಡಿಸ್‌ ಅವರ ಹೆಸರನ್ನು ನಾಮಕರಣ ಮಾಡಬೇಕು. ಪ್ರತಿಮೆ ಸ್ಥಾಪಿಸುವುದು, ಜಾರ್ಜ್‌ ಫರ್ನಾಂಡಿಸ್‌ ಅವರ ಕೊಡುಗೆ ಗಮನಿಸಿ ಮರಣೋತ್ತರವಾಗಿ ಅವರಿಗೆ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡಬೇಕು’ ಎಂದು ಜಾರ್ಜ್‌ ಫರ್ನಾಂಡಿಸ್‌ ಸಾಮಾಜಿಕ ಶಿಕ್ಷಣ ಟ್ರಸ್ಟ್‌ ವತಿಯಿಂದ ಬಿ. ಆರ್‌. ಪಾಟೀಲ ಹಾಗೂ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

ಮಾಜಿ ಸಚಿವ ಎಸ್.ಕೆ. ಕಾಂತಾ, ಮಾಜಿ ಶಾಸಕ ಮೈಕೆಲ್‌ ಫರ್ನಾಂಡಿಸ್‌ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಮಲ್ಲನಗೌಡ ಪಿ. ನಾಡಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.