ADVERTISEMENT

ಕೇಂದ್ರ ಹಣ ಸಂಪೂರ್ಣ ಬಳಕೆ: ಸಚಿವರ ಸಮಜಾಯಿಷಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2018, 11:38 IST
Last Updated 9 ಜುಲೈ 2018, 11:38 IST

ಬೆಂಗಳೂರು: ಪ್ರಧಾನಮಂತ್ರಿ ಗ್ರಾಮ್ ಸಡಕ್‌ ಯೋಜನೆಯಡಿ ಕೇಂದ್ರ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಬಳಸಿಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎನ್‌.ರವಿಕುಮಾರ್‌ ಪ್ರಶ್ನೆಗೆ ಉತ್ತರಿಸಿ, ರಾಜ್ಯ ಸರ್ಕಾರ ಗ್ರಾಮ್ ಸಡಕ್‌ ಯೋಜನೆಯಲ್ಲಿ ಉತ್ತಮ ನಿರ್ವಹಣೆ ಮಾಡಿದ ಕಾರಣಕ್ಕಾಗಿ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಸ್ತಿಯನ್ನೂ ರಾಜ್ಯ ಪಡೆದಿದೆ ಎಂದರು.

‘ಮಹಾಲೆಕ್ಕಪಾಲರ ವರದಿಯಲ್ಲಿ ಹಣ ಬಳಕೆ ಆಗಿಲ್ಲ ಎಂದು ನಮೂದಾಗಿರುವುದು ಗೊಂದಲಕ್ಕೆ ಕಾರಣವಾಗಿರುವುದು ನಿಜ. ಸಾಮಾನ್ಯವಾಗಿ ಆಯವ್ಯಯದಲ್ಲಿ ಹಣ ನಿಗದಿ ಮಾಡುವಾಗ ಕೇಂದ್ರದಿಂದ ಇಂತಿಷ್ಟು ಹಣ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿರುತ್ತವೆ. ನಿರೀಕ್ಷೆ ಮಾಡಿದಷ್ಟು ಹಣ ಬರದೇ ಇದ್ದಾಗ, ಅಲ್ಲಿಂದ ಬಂದ ಅನುದಾನಕ್ಕೆ ಅನುಗುಣವಾಗಿ ರಾಜ್ಯದ ಪಾಲು ನೀಡುತ್ತೇವೆ’ ಎಂದು ಸಚಿವರು ತಿಳಿಸಿದರು.

ADVERTISEMENT

‘ಕೆಲವು ವರ್ಷ ನಾವು ನಿರೀಕ್ಷೆ ಮಾಡಿದ ಅನುದಾನದಲ್ಲಿ ಶೇ 60 ರಷ್ಟೂ ಬರಲಿಲ್ಲ. 2016–17 ರಲ್ಲಿ ₹1348 ಕೋಟಿ ನಿರೀಕ್ಷೆ ಮಾಡಿದ್ದೆವು. ಆದರೆ, ಸಿಕ್ಕಿದ್ದು ₹ 255 ಕೋಟಿ. ಇದಕ್ಕೆ ರಾಜ್ಯದ ಪಾಲು ₹ 206 ಕೋಟಿ ಸೇರಿಸಿ ಕಾಮಗಾರಿ ಕೈಗೊಳ್ಳಬೇಕಾಯಿತು’ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.