ADVERTISEMENT

ಚಿನ್ನಾಭರಣ ಕಳವು: ‘ಪಾರಿವಾಳ’ ಮಂಜ ಸೆರೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 15:56 IST
Last Updated 7 ಅಕ್ಟೋಬರ್ 2024, 15:56 IST
ಮಂಜ 
ಮಂಜ    

ಬೆಂಗಳೂರು: ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ಚಿನ್ನಾಭರಣ ಹಾಗೂ ನಗದು ಕಳವು ಮಾಡುತ್ತಿದ್ದ ಆರೋಪಿಯನ್ನು ಸಿಟಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮುಕುಂಡಪಲ್ಲಿಯ ನಿವಾಸಿ ಮಂಜುನಾಥ ಅಲಿಯಾಸ್‌ ‘ಪಾರಿವಾಳ’ ಮಂಜ ಬಂಧಿತ ಆರೋಪಿ.

‘ಆರೋಪಿಯಿಂದ ₹30 ಲಕ್ಷ ಮೌಲ್ಯದ 475 ಗ್ರಾಂ. ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಬೈಕ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ನಗರ್ತಪೇಟೆಯ ಬಾಡಿಗೆ ಮನೆಯಲ್ಲಿ ಆರೋಪಿ ನೆಲಸಿದ್ದ. ರಾತ್ರಿ ವೇಳೆ ಚಿನ್ನಾಭರಣ ಕಳವು ಮಾಡಿ, ತಮಿಳುನಾಡಿಗೆ ತೆರಳುತ್ತಿದ್ದ. ಅಲ್ಲಿ ಕಡಿಮೆ ಬೆಲೆಗೆ ಚಿನ್ನಾಭರಣ ಮಾರಾಟ ಮಾಡುತ್ತಿದ್ದ. ಅದರಿಂದ ಬಂದ ಹಣದಲ್ಲಿ ಮೋಜು ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಚಿಕ್ಕಪೇಟೆಯ ಆರ್‌ಟಿ ಸ್ಟ್ರೀಟ್‌ನ ಮಾಣಿಕ್‌ ಮೇವಾ ಅಂಗಡಿ ಬಳಿಯ ನಿವಾಸಿ ಉಪೇಶ್ ಭಂಡಾರಿ ಎಂಬುವವರ ಮನೆಯ ಬೀಗ ಒಡೆದು 105 ಗ್ರಾಂ. ಚಿನ್ನಾಭರಣ ಕಳ್ಳತನ ಮಾಡಿದ್ದ. ಮನೆ ಮಾಲೀಕರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ಬಂಧನದಿಂದ ಸಿಟಿ ಮಾರುಕಟ್ಟೆ ಠಾಣೆಯಲ್ಲಿ ಮೂರು ಹಾಗೂ ಹಲಸೂರು ಗೇಟ್‌ ಠಾಣೆಯಲ್ಲಿ ದಾಖಲಾಗಿದ್ದ ಒಂದು ಕಳ್ಳತನ ಪ್ರಕರಣ ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.

ವಾಹನ ಕಳವು–ಆರೋಪಿ ಸೆರೆ: ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಇದೇ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಾದರಾಯನಪುರದ ಹಳೇಗುಡ್ಡದಹಳ್ಳಿಯ ನಿವಾಸಿ ಉಮ್ಮರ್‌ ಫಾರೂಕ್ (24) ಬಂಧಿತ.

ಆರೋಪಿಯಿಂದ ₹3 ಲಕ್ಷ ಮೌಲ್ಯದ ಆರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಚಿಕ್ಕಪೇಟೆಯ ನಿವಾಸಿ ಕೆ.ವಿ.ಶಬರೀಷ್ ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.‌

‘ಆರೋಪಿ ಬಾಡಿಗೆ ಮನೆಯಲ್ಲಿ ನೆಲಸಿದ್ದ. ರಾತ್ರಿ ವೇಳೆ ರಸ್ತೆ ಬದಿ ಹಾಗೂ ಮನೆಯ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

ಆರೋಪಿ ಬಂಧನದಿಂದ ಸಿಟಿ ಮಾರುಕಟ್ಟೆ ಠಾಣೆಯಲ್ಲಿ ಮೂರು, ಕಾಟನ್‌ಪೇಟೆ, ಬ್ಯಾಟರಾಯನಪುರ ಹಾಗೂ ಮೈಸೂರು ವಿದ್ಯಾರಣ್ಯಪುರ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.